

ರಾಣೆಬೆನ್ನೂರ: ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಹಾನಿ ಎಂಬ ಕಾರಣದಿಂದ ತೆಳು ಪ್ಲಾಸ್ಟಿಕ್ ಬಳಕೆಯನ್ನೇ ನಿಷೇಧಿಸಲಾಗಿದೆ. ಆದರೆ, ಇದು ಬಾಯಿ ಮಾತಿಗೆ, ಸರ್ಕಾರಿ ಕಡತಕ್ಕೆ ಮಾತ್ರ ಸೀಮಿತವಾದಂತಾಗಿದೆ.
ನಗರದ ವಿವಿಧ ಮಾರುಕಟ್ಟೆ ಸೇರಿ ತಾಲೂಕಿನಾದ್ಯಂತ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿದೆ. ಸರ್ಕಾರದ ಸೂಚನೆ ಪ್ರಕಾರ, ಪ್ಲಾಸ್ಟಿಕ್‌ಅನ್ನು ಬಳಕೆಗೆ ಮಾತ್ರವಲ್ಲ, ಅಂಗಡಿ-ಮುಂಗಟ್ಟುಗಳಲ್ಲಿ ಮಾರಾಟ ಕೂಡ ಮಾಡದಂತೆ ನಿರ್ಬಂಧಿಸಬೇಕು. ಆದರೆ, ನಗರದಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
ನಗರದ ಹೂವಿನ ಮಾರುಕಟ್ಟೆ ಸೇರಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿಯೂ ಅಧಿಕವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ನಗರಸಭೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರು ವರ್ಷದ ಹಿಂದೆ ಸರ್ಕಾರ ಹೊರಡಿಸಿದ ಸುತ್ತೋಲೆ ಪ್ರಕಾರ, ನಗರಸಭೆಯೂ ಪ್ಲಾಸ್ಟಿಕ್ ನಿಷೇಧಿಸಿ ಪ್ರಕಟಣೆ ನೀಡಿದೆ. ನಗರಸಭೆ ಸಿಬ್ಬಂದಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದ್ದಾರೆ. ಅಲ್ಲದೆ, ಆ ಸಮಯದಲ್ಲಿ ನೆಪಮಾತ್ರಕ್ಕೆ ಕೆಲ ಪ್ಲಾಸ್ಟಿಕ್ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದರಿಂದಾಗಿ ಕಿರಾಣಿ ಅಂಗಡಿ, ಹೋಟೆಲ್ ಸೇರಿ ನಾನಾ ಕಡೆಗಳಲ್ಲಿ ತೆಳು ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ರಾಜಾರೋಷವಾಗಿ ಬಳಸಲಾಗುತ್ತಿದೆ. ಜನ ಏನೇ ಖರೀದಿಸಿದರೂ ಪ್ಲಾಸ್ಟಿಕ್‌ಗಳಲ್ಲಿ ಹಾಕಿ ನೀಡಲಾಗುತ್ತಿದೆ. ಸರ್ಕಾರದ ಸುತ್ತೋಲೆ ಬಂದಾಗ ದಾಳಿ ನಡೆಸಿ ಕೈತೊಳೆದುಕೊಂಡಿರುವ ಅಧಿಕಾರಿಗಳು ಮಾತ್ರ ಮತ್ತೆ ಪ್ಲಾಸ್ಟಿಕ್ ಬಳಕೆ ತಡೆಯುವುದರತ್ತ ಗಮನ ಹರಿಸುತ್ತಿಲ್ಲ ಎಂಬುದು ಪರಿಸರ ಪ್ರೇಮಿಗಳ ಆರೋಪವಾಗಿದೆ.
ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುತ್ತಿರುವುದರಿಂದ ಪರಿಸರ ಹಾನಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಕಿರಾಣಿ ಅಂಗಡಿ, ಹೋಟೆಲ್‌ನವರು ಕಟ್ಟಡದ ಮುಂಭಾಗದಲ್ಲಿಯೇ ಪ್ಲಾಸ್ಟಿಕ್ ಚೀಲಗಳನ್ನು ಬಿಸಾಡುತ್ತಿದ್ದಾರೆ. ಇದರಿಂದಾಗಿ ಕಸ, ಕಡ್ಡಿ ರಾಶಿ ಹೆಚ್ಚುತ್ತಿದೆ. ಇನ್ನು ಚರಂಡಿ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಬೀಳುತ್ತಿರುವುದರಿಂದ ನೀರು ಹರಿಯಲು ವ್ಯವಸ್ಥೆ ಇಲ್ಲದೆ ದೊಡ್ಡ ಸಮಸ್ಯೆ ಉಂಟಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕದಿದ್ದರೆ, ಪರಿಸರಕ್ಕೆ ಹೆಚ್ಚಿನ ಹಾನಿಯಾಗುವುದರಲ್ಲಿ ಅನುಮಾನವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಗ್ರಾಮೀಣ ಭಾಗದಲ್ಲೂ ಪ್ಲಾಸ್ಟಿಕ್ ಹಾವಳಿ ತಡೆಯುವಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಳೆದ ಎರಡ್ಮೂರು ತಿಂಗಳ ಹಿಂದೆಯೇ ಎಲ್ಲ ಗ್ರಾಪಂಗೆ ಸೂಚನೆ ನೀಡಿ, ಆದೇಶಿಸಿದೆ. ಆದರೆ, ಈವರೆಗೂ ಗ್ರಾಪಂ ಮಟ್ಟದಲ್ಲಿ ಪರಿಣಾಮಕಾರಿ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಿಲ್ಲ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಕಂಡುಬರುತ್ತಿದೆ.
ಹಣ್ಣು, ಹೂವು, ತರಕಾರಿ ವ್ಯಾಪಾರಸ್ಥರಿಂದ ಹಿಡಿದು ಕಿರಾಣಿ, ಹೋಟೆಲ್‌ಗಳಲ್ಲೂ ತೆಳ್ಳಗಿನ ಪ್ಲಾಸ್ಟಿಕ್ ಚೀಲ (ಕ್ಯಾರಿ ಬ್ಯಾಗ್) ಬಳಕೆಯಾಗುತ್ತಿದೆ. ಪರಿಸರ ರಕ್ಷಣೆಗೆ ಮೊದಲು ಪ್ಲಾಸ್ಟಿಕ್ ನಿಷೇಧ ಅಗತ್ಯವಿದೆ. ನಗರಸಭೆ ಸಂಗ್ರಹಿಸುವ ಘನತ್ಯಾಜ್ಯ ಘಟಕದಲ್ಲಿ ಪ್ಲಾಸ್ಟಿಕ್ ಹೆಚ್ಚಾಗಿದೆ. ನಗರಸಭೆ ಇದಕ್ಕೆ ಕಡಿವಾಣ ಹಾಕಬೇಕು.ರಮೇಶ ಎಸ್.ಎಚ್., ಪರಿಸರ ಪ್ರೇಮಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, 40 ಮೈಕ್ರಾನ್‌ಗೂ ಈಗ ಅವಕಾಶವಿಲ್ಲ. ಈ ಕುರಿತು ಈಗಾಗಲೇ ತಿಳಿವಳಿಕೆ ಹೇಳಲಾಗಿದೆ. ಆದರೂ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.ನಿಂಗಪ್ಪ ಕುಮ್ಮಣ್ಣನವರ, ನಗರಸಭೆ ಆಯುಕ್ತ