ಸಹಪಠ್ಯ ಚಟುವಟಿಕೆಗಳಿಂದ ಕಾರ್ಯೋತ್ಸಾಹ ಹೆಚ್ಚಳ

Exif_JPEG_420
Exif_JPEG_420
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ತಮ್ಮ ಕಾರ್ಯಗಳಲ್ಲಿ ಹೆಚ್ಚು ಕ್ರೀಯಾಶೀಲ, ಉತ್ಸಾಹದಿಂದ ಪಾಲ್ಗೊಳ್ಳಲು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಹಪಠ್ಯ ಚಟುವಟಿಕೆಗಳು ಶಿಕ್ಷಕರ ಕಾರ್ಯೋತ್ಸಾಹ ಹೆಚ್ಚಿಸಲು ಸಹಕಾರಿ ಎಂದು ಗ್ರಾಮೀಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎನ್.ಎಸ್. ದಫೇದಾರ ಹೇಳಿದರು.
ನಗರದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಧಾರವಾಡ ಗ್ರಾಮೀಣ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರಲ್ಲಿ ಅನೇಕ ಪ್ರತಿಭೆಗಳು ಇರುತ್ತವೆ. ಆ ಪ್ರತಿಭೆ ಪ್ರದರ್ಶಿಸಲು ವೇದಿಕೆಗಳು ಅಗತ್ಯ. ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಇಂತಹ ಚಟುವಟಿಕೆಗಳಲ್ಲಿ ತೊಡಗುವುದರಿಂದ ಶಿಕ್ಷಕರಲ್ಲಿ ಕ್ರೀಯಾಶೀಲತೆ ಅಧಿಕವಾಗಿ ಏಕತಾನತೆ ದೂರವಾಗಿ ಕಲಿಕಾ ಕ್ರಿಯೆಗಳಲ್ಲಿ ಉತ್ಸಾಹದಿಂದ ತೊಡಗಲು ಸಾಧ್ಯ ಎಂದರು.
ಪ್ರೌಢ ಶಾಲಾ ಶಿಕ್ಷಣ ಸಂಯೋಜಕ ಟಿ.ಎನ್. ಸೈಯದ್ ಮಾತನಾಡಿ, ಶಿಕ್ಷಕರ ಪ್ರತಿಭೆ ಪ್ರದರ್ಶಿಸಲು ಶಿಕ್ಷಣ ಇಲಾಖೆ ಪ್ರತಿ ವರ್ಷ ಸಹಪಠ್ಯ ಚಟುವಟಿಕೆ ಸ್ಪರ್ಧೆ ಏರ್ಪಡಿಸುತ್ತಿದೆ. ಈ ಸ್ಪರ್ಧೆಯಲ್ಲಿ ಹೆಚ್ಚಿನ ಶಿಕ್ಷಕರು ಪಾಲ್ಗೊಳ್ಳಬೇಕು ಎಂದರು.
ಅಜಿತ ದೇಸಾಯಿ, ರಾಜಶೇಖರ ಹೊನ್ನಪ್ಪನವರ ಮಾತನಾಡಿದರು. ಆದರ್ಶ ಶಾಲೆ ಮುಖ್ಯೋಪಾಧ್ಯಾಯ ಸುರೇಶ ಸನದಿ, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ ಕುರಕುರಿ, ಚಂದ್ರು ತಿಗಡಿ, ಶ್ರೀಧರ ಗಸ್ತಿ , ಎನ್.ಎಸ್. ಕಮ್ಮಾರ, ಎಸ್. ಸಲಗರ, ಇತರರು ಇದ್ದರು.
ಎಸ್.ಎಸ್. ಸವಾಯಿ ಸ್ವಾಗತಿಸಿದರು. ಮಾಲತೇಶ ನಿಂಬಕ್ಕನವರ ನಿರೂಪಿಸಿದರು. ಅರುಣ ನವಲೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net