ಕೊಡಗಿನಲ್ಲಿ ಹೆಚ್ಚಾದ ಭೂ ಪರಿವರ್ತನೆ

Increased land conversion in Kodagu
Published on

ಮಡಿಕೇರಿ:

ಪಶ್ಚಿಮಘಟ್ಟದ ಸೂಕ್ಷ್ಮ ವಲಯದಲ್ಲಿ ಬರುವ ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಪರಿಸರ ಪ್ರಿಯರ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲೆಯಲ್ಲಿ ನಡೆಯುತ್ತಿರುವ ಭೂ ಪರಿವರ್ತನೆ ಮತ್ತು ಇದರಿಂದ ಆಗುವ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ ಕಳೆದ ಮೂರು ವರ್ಷಗಳಲ್ಲಿ ಕೊಡಗಿನಲ್ಲಿ ಬರೋಬ್ಬರಿ ೧,೯೭೭ ಭೂ ಪರಿವರ್ತನೆಯ ಪ್ರಸ್ತಾವನೆಗಳು ಸರ್ಕಾರದಿಂದ ಸ್ವೀಕೃತವಾಗಿದೆ.

೨೦೧೮ರ ಆಗಸ್ಟ್‌ನಲ್ಲಿ ಕೊಡಗಿನಲ್ಲಿ ಸಂಭವಿಸಿದ್ದ ಭೀಕರ ಪ್ರಾಕತಿಕ ದುರಂತ ಹಲವು ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಇಲ್ಲಿಯ ಸೂಕ್ಷ್ಮ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಾಳಿಯೇ ಇಂಥ ಅನಾಹುತಗಳಿಗೆ ಕಾರಣ ಎನ್ನುವ ವಾದ ಕೇಳಿ ಬಂದಿತ್ತು. ಈ ಬೆನ್ನಲ್ಲೇ ದುರಂತ ಸಂಭವಿಸಿದ್ದ ಸ್ಥಳಗಳ ಪರಿಶೀಲನೆ ನಡೆಸಿದ್ದ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಕೊಡಗಿನಲ್ಲಿ ಭೂ ಪರಿವರ್ತನೆ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ವರದಿ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಭೂ ಪರಿವರ್ತನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ೨೦೧೮ರ ನವೆಂಬರ್ ೨೩ರಂದು ಅಂದಿನ ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು. ನಂತರ ೨೦೧೯ರ ಮೇ ೮ರಂದು ಆದೇಶದಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ವಾಸ್ತವ್ಯದ ಉದ್ದೇಶಕ್ಕೆ ಮನೆ ನಿರ್ಮಾಣ ಮಾಡುವವರಿಗೆ ೧೫ರಿಂದ ೨೦ ಸೆಂಟ್ಸ್ ಪ್ರದೇಶಕ್ಕೆ ಸೀಮಿತಗೊಳಿಸಿ ಭೂ ಪರಿವರ್ತನೆಗೆ ಅನುಮತಿಸಲು ಆದೇಶ ಹೊರಡಿಸಲಾಗಿತ್ತು. ಕೊಡಗಿನಲ್ಲಿ ಸ್ಥಗಿತಗೊಳಿಸಲಾಗಿದ್ದ ಭೂ ಪರಿವರ್ತನೆಗೆ ೨೦೨೦ರಲ್ಲಿ ಮತ್ತೆ ಯಥಾ ಪ್ರಕಾರ ಬಹುತೇಕ ಮುಕ್ತ ಅವಕಾಶ ಸಿಕ್ಕಿತ್ತು. ಇದಾದ ನಂತರ ಯಾವುದೇ ಲಂಗು ಲಗಾಮಿಲ್ಲದೆ ಜಿಲ್ಲೆಯಲ್ಲಿ ಭೂ ಪರಿವರ್ತನೆ ಮುಂದುವರಿದಿದೆ.
ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ನಂತರ ಇಲ್ಲಿ ಭೂಪರಿವರ್ತನೆಗೆ ಸರ್ಕಾರ ಷರತ್ತುಗಳನ್ನು ವಿಧಿಸಿದೆ. ನಾನ್ ಸ್ಟೇಬಲ್ ಏರಿಯಾ ಇದ್ದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು. ಭೂ ಪರಿವರ್ತನೆಗೆ ಅನುಮತಿ ಕೋರಿರುವ ಪ್ರದೇಶ ನದಿ, ಹಳ್ಳಗಳಿಂದ ಕನಿಷ್ಠ ೧೦ ಮೀ. ದೂರದಲ್ಲಿರಬೇಕು. ತೀವ್ರತರವಾದ ಇಳಿಜಾರು ಇರುವ ಮತ್ತು ಕಣಿವೆಯಂತಹ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವುದು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು. ೨೦೧೮ರ ಮಳೆಗಾಲದಲ್ಲಿ ಭೂ ಕುಸಿತ ಉಂಟಾದ ಜಮೀನಿನಲ್ಲಿ ಮನೆ ನಿರ್ಮಾಣ ಮಾಡುವುದು ಸೂಕ್ತವಲ್ಲದ ಕಾರಣ ಅಂತಹ ಜಮೀನುಗಳಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು ಎನ್ನುವ ನಿಬಂಧನೆಗಳಿವೆ.

ಆದರೆ ಎಲ್ಲಾ ನಿಬಂಧನೆಗಳನ್ನು ಮೀರಿ ಭೂ ಪರಿವರ್ತನೆ ನಡೆಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕೊಡಗಿನಲ್ಲಿ ಕಾಫಿ ತೋಟಗಳು ಮತ್ತು ಇತರ ಜಮೀನುಗಳು ಸೇರಿದಂತೆ ಬರೋಬ್ಬರಿ ೧,೯೭೭ ಭೂ ಪರಿವರ್ತನೆಯ ಪ್ರಸ್ತಾವನೆಗಳು ಸರ್ಕಾರದಿಂದ ಸ್ವೀಕೃತವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಮೂರು ವರ್ಷಗಳ ಅವಧಿಯಲ್ಲಿ ಭೂ ಪರಿವರ್ತನೆಗಾಗಿ ಮಡಿಕೇರಿ ತಾಲೂಕಿನಲ್ಲಿ ೬೬೫ ಪ್ರಸ್ತಾವನೆಗಳು ಸ್ವೀಕಾರವಾದರೆ, ೪೬೫ ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೩೨೮ ಪ್ರಸ್ತಾವನೆಗಳು ಸ್ವೀಕಾರವಾಗಿದ್ದು, ೧೪೮ ಅರ್ಜಿಗಳಿಗೆ ಅನುಮೋದನೆ ಸಿಕ್ಕಿದೆ. ಕುಶಾಲನಗರ ತಾಲೂಕಿನಲ್ಲಿ ೫೦೬ ಪ್ರಸ್ತಾವನೆಗಳು ಸ್ವೀಕಾರವಾಗಿದ್ದು, ೩೪೪ ಪ್ರಸ್ತಾವನಗಳಿಗೆ ಅನುಮತಿ ಕೊಡಲಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ೮೨೩ ಪ್ರಸ್ತಾವನೆಗಳು ಸ್ವೀಕಾರವಾಗಿದ್ದು, ೬೦೨ ಪ್ರಸ್ತಾವನೆಗಳಿಗೆ ಅನುಮತಿ ದೊರೆತಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ೬೬೫ ಪ್ರಸ್ತಾವನೆಗಳನ್ನು ಸ್ವೀಕರಿಸಿದ್ದು, ೪೧೮ ಪ್ರಸ್ತಾವನೆಗಳಿಗೆ ಅನುಮತಿ ಸಿಕ್ಕಿದೆ.

ಕೊಡಗಿನಲ್ಲಿ ಸ್ವಂತ ಉಪಯೋಗಕ್ಕೆ ಸಣ್ಣ ಪ್ರಮಾಣದ ಭೂ ಪರಿವರ್ತನೆಗೆ ಯಾರ ವಿರೋಧವೂ ಇಲ್ಲ. ಆದರೆ ಹಲವರು ಹಣದ ಆಸೆಗಾಗಿ ವಾಣಿಜ್ಯ ಭೂ ಪರಿವರ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ರೀತಿಯ ವ್ಯಾಪಾರದ ಮೂಲಕ ಭಾರಿ ಲಾಭ ಗಳಿಸಿರುವ ಅತ್ಯಂತ ಶ್ರೀಮಂತರು ಈಗ ತಮ್ಮ ಹಣ ದ್ವಿಗುಣಗೊಳಿಸುವ ಸಲುವಾಗಿ ಲಾಭವನ್ನು ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್‌ಗೆ ಮರುಹೂಡಿಕೆ ಮಾಡುತ್ತಿರುವ ಆರೋಪ ಇದೆ. ಇಂಥ ವಿದ್ಯಮಾನಗಳಿಂದ ಭೂ ಪರಿವರ್ತನೆ ಹೆಚ್ಚಾಗುತ್ತಿದ್ದು, ಕೊಡಗಿನ ಅಸ್ತಿತ್ವದ ಬಗ್ಗೆಯೇ ಆತಂಕದ ಮಾತುಗಳು ಕೇಳಿಬರುತ್ತಿದೆ.

ಕೊಡಗಿನಲ್ಲಿ ನಡೆಯುತ್ತಿರುವ ಭೂ ಪರಿವರ್ತನೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಸದನದ ಗಮನ ಸೆಳೆದಿದ್ದಾರೆ. ಭೂ ಪರಿವರ್ತನೆಗೆ ಸ್ಥಳೀಯವಾಗಿ ವಿರೋಧಗಳಿದ್ದರೂ, ಹೋರಾಟಗಳು ನಡೆಯುತ್ತಿದ್ದರೂ ಸರ್ಕಾರದ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ವಿರೋಧ
ಮತ್ತು ಹೋರಾಟದ ಮಧ್ಯೆಯೂ ಭೂ ಪರಿವರ್ತನೆ ಯಾವ ಕಾರಣಕ್ಕಾಗಿ ಮಾಡಲಾಗುತ್ತಿದೆ ? ಭೂ ಪರಿವರ್ತನೆಗೆ ಅನುಮತಿ ಕೊಡುವುದಕ್ಕೆ ಸಂಬಂಧಿಸಿದಂತೆ ಯಾವ ಕಾನೂನು ರಾಜ್ಯದಲ್ಲಿ ಇದೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೊಡಗಿನಲ್ಲಿ ಸಿಎನ್‌ಸಿ ಸಂಘಟನೆ ನಡೆಸುತ್ತಿರುವ ಹೋರಾಟ ಸರ್ಕಾರದ ಗಮನಕ್ಕೆ ಬಂದಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶಗಳನ್ವಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಕೊಡಗಿನಲ್ಲಿ ಖಾಸಗಿ ಕಾಫಿ ತೋಟಗಳನ್ನು ಭಾಗಗಳನ್ನಾಗಿ ಮಾಡಿ ಹೊರ ಜಿಲ್ಲೆ, ಹೊರ ರಾಜ್ಯದವರರಿಗೆ ಮಾರಾಟ ಮಾಡಿ, ಮನೆ ನಿವೇಶನಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಜಮೀನುಗಳನ್ನು ಖರೀದಿಸಿದ ಮಾಲೀಕರು ಅಲ್ಲಿನ ಮರ ಗಿಡಗಳನ್ನು ನಾಶ ಮಾಡಿ ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಾಧ್ಯತೆ ಇರುತ್ತದೆ ಎಂದು ಕೊಡವ ನ್ಯಾಷನ್ ಕೌನ್ಸಿಲ್ (ಸಿ.ಎನ್.ಸಿ.) ಸಂಘಟನೆ ವತಿಯಿಂದ ಹೋರಾಟ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೈ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗಳು ಪವಿತ್ರ ಕೊಡವ ಲ್ಯಾಂಡ್ ನಾಶಕ್ಕೆ ಕಾರಣವಾಗಬಹುದು.
ಎನ್.ಯು. ನಾಚಪ್ಪ, ಮುಖ್ಯಸ್ಥ, ಕೊಡವ ನ್ಯಾಷನಲ್ ಕೌನ್ಸಿಲ್

ಭೂ ಪರಿವರ್ತನೆಗೆ ಸ್ಥಳೀಯವಾಗಿ ವಿರೋಧಗಳಿದ್ದರೂ, ಹೋರಾಟಗಳು ನಡೆಯುತ್ತಿದ್ದರೂ ಸರ್ಕಾರದ ಗಮನಕ್ಕೆ ಬಂದಿಲ್ಲವೇ ? ವಿರೋಧ ಮತ್ತು ಹೋರಾಟದ ಮಧ್ಯೆಯೂ ಭೂ ಪರಿವರ್ತನೆ ಯಾವ ಕಾರಣಕ್ಕಾಗಿ ಮಾಡಲಾಗುತ್ತಿದೆ ? ಭೂ ಪರಿವರ್ತನೆಗೆ ಅನುಮತಿ ಕೊಡುವುದಕ್ಕೆ ಸಂಬಂಧಿಸಿದಂತೆ ಯಾವ ಕಾನೂನು ರಾಜ್ಯದಲ್ಲಿ ಇದೆ ? ಸರ್ಕಾರ ಕೂಡಲೇ ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು. ದೊಡ್ಡ ಪ್ರಮಾಣದ ಭೂ ಪರಿವರ್ತನೆಗೆ ಸಂಬಂಧಿಸಿದಂತೆ ಕಾನೂನು ಬಿಗಿ ಮಾಡಬೇಕು.
ಎಂ.ಪಿ. ಸುಜಾ ಕುಶಾಲಪ್ಪ, ವಿಧಾನಪರಿಷತ್ತು ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net