

ಕಡೂರು: ಸಮಗ್ರ ಕೃಷಿಗೆ ಆದ್ಯತೆ ನೀಡಿದಾಗ ಹೆಚ್ಚು ಆದಾಯ ಗಳಿಸಲು ಸಾಧ್ಯ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಅಭಿಪ್ರಾಯಪಟ್ಟರು.
ಪಿಳ್ಳೇನಹಳ್ಳಿಯಲ್ಲಿ ಬುಧವಾರ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಮೂಡಿಗೆರೆ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ನಡೆದ ಕೃಷಿ ವಸ್ತು ಪ್ರದರ್ಶನದ ಕೃಷಿ ಮೇಳದಲ್ಲಿ ಮಾತನಾಡಿದರು.
ಕೀಟನಾಶಕ, ರಸಗೊಬ್ಬರಗಳಿಂದ ಭೂಮಿ ಫಲವತ್ತತೆ ಜತೆಗೆ ಮಾನವನ ಆರೋಗ್ಯವೂ ಹಾಳಾಗುತ್ತಿದೆ. ಆದ್ದರಿಂದ ಸಾವಯವ ಕೃಷಿಗೆ ಗಮನಹರಿಸಿದರೆ ಆರೋಗ್ಯ ಸುಧಾರಣೆಯಾಗುತ್ತದೆ. ಆಧುನಿಕ ಶೈಲಿಯಲ್ಲಿ ಬಹು ಬೆಳೆ ಕೃಷಿಗೆ ಒತ್ತು ಕೊಡಬೇಕಿದೆ ಎಂದರು.
ದೊಡ್ಡ ಕುರುಬರಹಳ್ಳಿ ಬಸವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಯುವ ಜನರು ಕೃಷಿ ಆಧಾರಿತ ಬದುಕಿಗೆ ಹೆಚ್ಚು ಒತ್ತು ನೀಡಬೇಕು. ಮೂಡಿಗೆರೆ ಕೃಷಿ ವಿವಿ ವಿದ್ಯಾರ್ಥಿಗಳು ಹಮ್ಮಿಕೊಳ್ಳುವ ಕಾರ್ಯಾಗಾರಗಳು, ಸಂವಾದ ರೈತರಿಗೆ ಉಪಯುಕ್ತ ಎಂದು ಹೇಳಿದರು.
ಆಯ್ದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ತಲಾ ಐವರು ಪುರುಷ ಮತ್ತು ಮಹಿಳಾ ರೈತರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ನಿರ್ಮಿಸಿದ ಮಳಿಗೆಗಳು, ಖಾಸಗಿ ಮಳಿಗೆಗಳು, ವಿವಿಧ ಇಲಾಖೆಯ ಬೆಳೆಗಳ ಮಾಹಿತಿ ಮಳಿಗೆಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಕೃಷಿ ಸಂಬಂಧಿತ ವಸ್ತುಗಳ ಪ್ರದರ್ಶನಗಳು ಗಮನಸೆಳೆದವು.
ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ನಾರಾಯಣ್ ಎಸ್. ಮಾವರ್ಕರ್, ವಿವಿ ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲನಾಯಕ್, ಕೃಷಿ ಇಲಾಖೆ ಜಂಟಿನಿರ್ದೇಶಕಿ ಎಚ್.ಎಲ್.ಸುಜಾತಾ, ಆರ್.ಕೆ.ದಯಾನಂದ್, ಎ.ಟಿ ಕೃಷ್ಣಮೂರ್ತಿ, ಗ್ರಾಮದ ರಮೇಶ್, ಬಸವರಾಜಪ್ಪ, ಉದಯ್‌ಕುಮಾರ್, ಚಿದಾನಂದ್, ಶಿವನಂಜೇಗೌಡ, ದೇವಸಿಂಗ್ ನಾಯಕ್, ಚಂದ್ರನಾಯ್ಕ, ಮಹಾದೇವಪ್ಪ, ಮಲ್ಲೇಶಪ್ಪ, ಲೋಕೇಶ್, ರಮೇಶ್, ಸಂಯೋಜಕ ಭರತ್, ಕಾಂತರಾಜ್ ಇತರರಿದ್ದರು.