ಸರ್ಕಾರಿ ನೌಕರರಿಗೆ ಹೆಚ್ಚಿದ ಕಿರುಕುಳ, ಭದ್ರತೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ

NOUKARARA PROTEST
ವಿಜಯಪುರ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು. ಜುಬೇರ್ ಕೆರೂರ, ವಿಜಯಕುಮಾರ ಹತ್ತಿ, ರಾಜಶೇಖರ್ ದೈವಾಡಿ, ಶಿವರಾಜ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಜಾತಿ ನಿಂದನೆ ಹೆಸರಿನಲ್ಲಿ ಅಧಿಕಾರಿಗಳನ್ನು ಹೆದರಿಸುವುದು, ತೇಜೋವಧೆ ಮಾಡುವುದು, ಅಟ್ರಾಸಿಟಿ ಕೇಸ್ ದಾಖಲಿಸುವುದಾಗಿ ಹೆದರಿಸುವುದು, ಯುಟ್ಯೂಬ್ ಚಾನಲ್‌ನವರೆಂದು ಮಾನಸಿಕ ಕಿರುಕುಳ ನೀಡುವುದು, ದಲಿತ ಸಂಘಟನೆಗಳ ಹೆಸರಲ್ಲಿ ಸಂವಿಧಾನಾತ್ಮಕ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳ ಜೀವ ಹಿಂಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾ ನೌಕರರ ಸಂಘ ಹಾಗೂ ವಿವಿಧ ವೃಂದ ಸಂಘಗಳ ಸಹಯೋಗದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ನೌಕರರು ರಕ್ಷಣೆ ಕೋರಿ ಘೋಷಣೆ ಮೊಳಗಿಸಿದರು. ಬಳಿಕ ಜಿಲ್ಲಾಡಳಿತ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.

ಟೆಂಡರ್ ಪ್ರಕ್ರಿಯೆಯೊಂದರಲ್ಲಿ ತಿರಸ್ಕೃತವಾಗಿರುವ ಚಿಕ್ಕಲಕಿ ಎಂಟರ್‌ಪ್ರೈಜಸ್‌ನವರು 10 ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ವೈಯಕ್ತಿಕ ಹಗೆತನ ಸಾಧಿಸಿ ಅವರ ತೇಜೊವಧೆ ಮಾಡುವುದಕ್ಕಾಗಿ ದಲಿತ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಭೀಮ ಜ್ಯೋತಿ) ಬೆಂಗಳೂರು ಇವರ ಹೆಸರಿನಲ್ಲಿ, ಸಿಬ್ಬಂದಿ ಹಾಗೂ ಅಧಿಕಾರಿಗಳು ದಲಿತ ವಿರೋಧಿ ಎಂದು ಬಿತ್ತಿ ಪತ್ರಗಳನ್ನು ಮುದ್ರಿಸಿ ವಿಜಯಪುರ ನಗರದ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೆ ಅಂಟಿಸಿದ್ದಾರೆ. ಇದರಿಂದ ಅಧಿಕಾರಿಗಳು ನಿರ್ಭೀತರಾಗಿ ಕಾರ್ಯ ನಿರ್ವಹಿಸುವುದು ಕಷ್ಠ ಸಾಧ್ಯವಾಗುತ್ತಿದೆ ಎಂದರು.

2024-25 ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ಕರೆಯಲಾಗಿದ್ದ ಇ-ಪ್ರೊಕ್ಯೂರ್‌ಮೆಂಟ್ ಟೆಂಡರ್‌ಗಳಲ್ಲಿ ಹಲವಾರು ಏಜನ್ಸಿಯವರು ಭಾಗವಹಿಸಿರುತ್ತಾರೆ. ಆ ಪ್ರಕಾರ ಚಿಕ್ಕಲಕಿ ಎಂಟರ್‌ಪ್ರೈಜಸ್ ಸಹ ಭಾಗವಹಿಸಿದ್ದಾರೆ. ಆದರೆ, ಇವರು ಅಪಲೋಡ್ ಮಾಡಿರುವ ದಾಖಲೆಗಳು ಅಪೂರ್ಣವಿರುವುದರಿಂದ ಸದರಿ ಏಜನ್ಸಿಯವರು ಭಾಗವಹಿಸಿದ ಬಹುತೇಕ ಟೆಂಡರ್‌ಗಳ ತಾಂತ್ರಿಕ ಬಿಡ್‌ನಲ್ಲಿ ತಿರಸ್ಕೃತರಾಗಿದ್ದಾರೆ. ಹೀಗಾಗಿ ಈ ವಿಷಯಕ್ಕಾಗಿ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿರುವ ವಿ.ಸಿ. ನಂದಿಕೋಲ ಇವರ ವಿರುದ್ದ ಅನವಶ್ಯಕವಾಗಿ ಜಾತಿ ನಿಂದನೆ ಆರೋಪ ಹೊರಿಸುತ್ತಿದ್ದಾರೆ. ಮಾತೆತ್ತಿದರೆ ‘ನಾನು ದಲಿತ ನೀವೆಲ್ಲ ಸರ್ಕಾರಿ ನೌಕರರು ದಲಿತ ವಿರೋಧಿಗಳು ನಿಮ್ಮ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತೇನೆ’ ಎಂದು ಹೆದರಿಸುವುದು ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ನೌಕರರು ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತಿ ದೇವರ ಹಿಪ್ಪರಗಿ, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯಿತಿ ಸಿಂದಗಿ ಮುಂತಾದ ಕಚೇರಿಗಳಲ್ಲಿಯೂ ಇದೇ ರೀತಿಯ ವರ್ತನೆ ತೋರಿ ಜೀವ ಬೆದರಿಕೆ ಹಾಕುವುದು, ಜಾತಿ ನಿಂದನೆ ಮೊಕದ್ದಮೆ ದಾಖಲಿಸುತ್ತೇನೆ ಅಂತಾ ಹೆದರಿಸುವುದು, ದಬ್ಬಾಳಿಕೆ ಮಾಡುವುದು ಕೂಡಾ ಮಾಡಿರುತ್ತಾರೆ. ಈ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದರಲ್ಲದೇ ಹಾಗೊಂದು ವೇಳೆ ಕ್ರಮ ಕೈಗೊಳ್ಳದೇ ಹೋದಲ್ಲಿ ಮಾ.6 ರಂದು ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ನೌಕರರ ಸಂಘದ ಮುಖಂಡರಾದ ಜುಬೇರ್ ಕೆರೂರ, ವಿಜಯಕುಮಾರ ಹತ್ತಿ, ರಾಜಶೇಖರ್ ದೈವಾಡಿ, ಶಿವರಾಜ ಬಿರಾದಾರ, ವಿಶ್ವನಾಥ ಬೆಳ್ಳನವರ, ಗಂಗಾಧರ ಜೇವರ್, ನಿಜು ಮೇಲಿನಕೇರಿ, ದಶರಥ ಸಲರಕರ, ಗಣೇಶ ಡೊಬ್ಳೆ, ಬಶೀರ ನದಾಫ್, ಗಣಪತಿ ಭಾಣಿಕೋಲ, ವಿಜಯಕುಮಾರ ಮೆಕ್ಕಳಕಿ, ಶಿವಾನಂದ ಮಾಸ್ತಿಹೋಳಿ, ವಿಜಯಕುಮಾರ ಆಜೂರ, ಸಂಪತ ಗುಣಾರಿ, ಭಾರತಿ ಚಲವಯ್ಯ, ಪುಂಡಲಿಕ ಮಾನವರ, ಕೆ. ಕೆ. ಚವಾಣ್, ಡಿಡಿಪಿಐ ವಿ.ಸಿ. ನಂದಿಕೋಲ, ವಿವೇಕಾನಂದ ಹುಟಗಿಕರ, ಬಸವರಾಜ ತಳವಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net