

ಬಾಗಲಕೋಟೆ: ಪ್ರಸಕ್ತ ವರ್ಷ ಮುಂಗಾರು ಮಳೆ ಅಬ್ಬರ ಇಲ್ಲದೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆ ಆಗಿದ್ದು, ಇದೀಗ ಎರಡ್ಮೂರು ದಿನಗಳಿಂದ ಜಿಲ್ಲಾದ್ಯಂತ ಮಳೆ ಜಿನಗುಟ್ಟುತ್ತಿದೆ ವಿನಃ ಅಬ್ಬರ ಮಾತ್ರ ಇಲ್ಲವಾಗಿದೆ. ಆದರೆ, ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆ ಖಾನಾಪುರ ಭಾಗದಲ್ಲಿ ವರುಣಾರ್ಭಟ ಇರುವುದು ಜಿಲ್ಲೆಯ ಜನರಲ್ಲಿ ಸಮಾಧಾನ ತರಿಸಿದೆ.
ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿನ ಕೆರೆ, ಕಟ್ಟೆ, ನದಿಗಳು ಖಾಲಿಯಾಗಿ ಆಟದ ಮೈದಾನಗಳು ಆಗಿದ್ದವು. ಜುಲೈ ಮೊದಲ ವಾರದ ವರೆಗೂ ಅದೇ ಸ್ಥಿತಿ ಇತ್ತು. ಮುಖ್ಯವಾಗಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಉಕ್ಕಿ ಹರಿಯಲು ಜಿಲ್ಲೆಯಲ್ಲಿ ಸುರಿಯುವ ಮಳೆಗಿಂತ ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯನ್ನು ಹೆಚ್ಚು ಅಲವಂಬಿಸಿವೆ. ಇದೀಗ ಅಲ್ಲೆಲ್ಲ ವರುಣಾರ್ಭಟ ಆರಂಭವಾಗಿದ್ದರಿಂದ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ.
ಮಹಾರಾಷ್ಟ್ರದ ಕೃಷ್ಣಾ ಪಾತ್ರದಲ್ಲಿ ಮಳೆ ಅಬ್ಬರ ಜೋರಾಗಿರುವ ಪರಿಣಾಮ ಗುರುವಾರ ಕೃಷ್ಣಾ ನದಿಯಲ್ಲಿ ಹರಿದು ಬರುವ ನೀರಿನ ಪ್ರಮಾಣವೂ ಹೆಚ್ಚಳವಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಈಗಾಗಲೇ ಮಹಾರಾಷ್ಟ್ರದಿಂದ ಇನ್ನೂ ಹೆಚ್ಚಿನ ನೀರು ಬಿಟ್ಟಿರುವ ಮಾಹಿತಿ ಇದ್ದು, ಶುಕ್ರವಾರ ಅದು 70 ಸಾವಿರ ಕ್ಯೂಸೆಕ್ ತಲುಪಬಹುದು ಎನ್ನಲಾಗುತ್ತಿದೆ. ಹೀಗಾಗಿ ಹಿಪ್ಪರಗಿ ಜಲಾಶಯಕ್ಕೆ ಗುರುವಾರ ಹರಿದು ಬರುತ್ತಿದ್ದ 50 ಸಾವಿರ ಕ್ಯೂಸೆಕ್ ನೀರನ್ನು ಸಹ ಹೊರಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯೆ ಇರುವ ಹಿಪ್ಪರಗಿ ಜಲಾಶಯದಲ್ಲಿ ಗುರುವಾರ 3.820 ನೀರು ಸಂಗ್ರಹ ಇತ್ತು. ಇದರಲ್ಲಿ 0.800 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಇದೀಗ ಹೆಚ್ಚಿನ ನೀರು ಹರಿದು ಬರಲು ಆರಂಭಿಸಿದ್ದು, ಕೃಷ್ಣಾ ತೀರದ ರೈತರು ನಿಟ್ಟುಸಿರುವ ಬಿಡುವಂತಾಗಿದೆ.
ಜೂನ್ ಮತ್ತು ಜುಲೈ ಮೊದಲವಾರದಲ್ಲಿ ಕೃಷ್ಣಾ ನದಿ ಖಾಲಿ ಆಗಿದ್ದರಿಂದ ಹಿಪ್ಪರಗಿ ಜಲಾಶಯದ ಕೆಲಭಾಗ ಹಾಗೂ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಅವಲಂಬಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತೊಂದರೆ ಉಂಟಾಗಿತ್ತು. ಜಿಲ್ಲೆಯಲ್ಲಿ ಮಳೆಯಂತೂ ಕೈಕೊಟ್ಟಿದ್ದರಿಂದ ನೀರಿನ ಹಾಹಾಕಾರ ಉಂಟಾಗಿತ್ತು. ಇದೀಗ ಮಹಾಮಳೆಯಿಂದಾಗಿ ಕೃಷ್ಣಾ ನದಿಯ ಒಡಲು ತುಂಬಿಕೊಳ್ಳಲು ಆರಂಭಿಸಿದೆ.
ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಮಳೆ :
ಮತ್ತೊಂದೆಡೆ ಜಿಲ್ಲೆಯಲ್ಲಿ ಇನ್ನೂ ಸಹ ವರುಣ ನಿರೀಕ್ಷಿತ ಮಟ್ಟದಲ್ಲಿ ಕರುಣೆ ತೋರುತ್ತಿಲ್ಲ. ಎರಡು ದಿನಗಳಿಂದ ಜಿಲ್ಲಾದ್ಯಂತ ಸೊನೆ ಮಳೆ ಇದೆಯಾದರೂ ಅಬ್ಬರ ಮಾತ್ರ ಇಲ್ಲವಾಗಿದೆ. ಕರೆ, ಕಟ್ಟೆಗಳು ತುಂಬುವ ಮಟ್ಟಿಗೆ ಇನ್ನೂ ಮಳೆ ಆಗುತ್ತಿಲ್ಲ.
ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಮಳೆ 61.8 ಎಂಎಂ ಇದ್ದು, ಜು. 20 ರವರೆಗೆ 36.2 ಎಂಎಂ ಆಗಬೇಕಿತ್ತು. 41.7 ಎಂಎಂ ಸುರಿದಿದ್ದು, ಶೇ.15.2 ರಷ್ಟು ಹೆಚ್ಚಾಗಿದೆ. ಆದರೆ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 77.4 ರಷ್ಟು ಮಳೆ ಕೊರತೆಯಿಂದಾಗಿ ಮುಂಗಾರು ಬಿತ್ತನೆಗೆ ತೀವ್ರ ಹಿನ್ನೆಡೆ ಆಗಿದೆ. ಜುಲೈ ಮಧ್ಯಭಾಗದ ಬಳಿಕ ಮುಂಗಾರು ತಕ್ಕಮಟ್ಟಿಗೆ ಚುರುಕು ಪಡೆದಿದ್ದರೂ ನೆಲ ತುಂಬಿ ಹರಿಯುಷ್ಟರ ಮಟ್ಟಿಗೆ ಅಬ್ಬರಿಸುತ್ತಿಲ್ಲ. ಆದರೆ, ಎರಡು ದಿನಗಳಿಂದ ಮಲೆನಾಡಿನ ಅನುಭವ ಆಗುತ್ತಿದ್ದು, ಇಡೀ ದಿನ ಮೋಡಗಳಲ್ಲಿ ಸೂರ್ಯ ಮರೆಯಾಗಿ ಹೋಗಿದ್ದಾನೆ.