ನದಿಗಳಲ್ಲಿ ಹೆಚ್ಚಿದ ನೀರಿನ ಹರಿವು

SRS RIVER
Published on

ಶಿರಸಿ: ಮಂಗಳವಾರ ತಡರಾತ್ರಿ ಮತ್ತು ಬುಧವಾರ ಬೆಳಗಿನ ವೇಳೆ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಹಾನಿ ಉಂಟಾಗಿದೆ. ಜತೆಗೆ ತಾಲೂಕಿನ ನದಿಗಳಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗಿದೆ.

ಹುಲೇಕಲ್ ಮತ್ತು ಸಂಪಖಂಡ ಹೋಬಳಿಯ ವಿವಿಧೆಡೆ ಅಡಕೆ ಮರಗಳು ಮುರಿದು ಬಿದ್ದಿವೆ. ಕೆಲವೆಡೆ ವಿದ್ಯುತ್ ತಂತಿಗಳ ಮೇಲೆ ಗಿಡ ಮರಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

ನಗರದ ಗಾಳಿಮಾಸ್ತಿ ರಸ್ತೆಯಲ್ಲಿ ನೀರು ನಿಂತು ನಾಲ್ಕು ಮನೆಗಳ ಅಂಗಳ ಜಲಾವೃತಗೊಂಡಿದೆ. ಇಲ್ಲಿಯ ಲಯನ್ಸ್ ನಗರ, ಧುಂಡಶಿ ನಗರದಲ್ಲಿ ರಸ್ತೆ ಜಲಾವೃತಗೊಂಡು ಮನೆಯೊಳಗೆ ನೀರು ಬರುವ ಆತಂಕ ಉಂಟಾಗಿದೆ.

ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಗೋಳಿಮಕ್ಕಿ ಮಾರ್ಗದ ಸರಕುಳಿ ಸೇತುವೆ ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಬನವಾಸಿ ಭಾಗದಲ್ಲಿ ವರದಾ ನದಿಯಲ್ಲಿ ನೀರಿನ ಹರಿವು ಏರತೊಡಗಿದೆ. ಶಿವಮೊಗ್ಗ ಮತ್ತು ಸಾಗರ ಭಾಗದಲ್ಲಿ ಮಳೆಯ ಪ್ರಮಾಣ ಜಾಸ್ತಿಯಾದರೆ ನೀರಿನ ಹರಿವು ಇನ್ನಷ್ಟು ಜಾಸ್ತಿಯಾಗಲಿದೆ. ವರದೆಯ ಪ್ರವಾಹ ಜಾಸ್ತಿಯಾದರೆ ಬನವಾಸಿ ಭಾಗದ ನೂರಾರು ಎಕರೆ ಭತ್ತದ ಗದ್ದೆ ಮುಳುಗಡೆ ಆಗಲಿದೆ. ಈ ವರ್ಷ ಅಜ್ಜರಣಿ ಸೇತುವೆ ನಿರ್ಮಾಣ ಕಾಮಗಾರಿ ಸಹ ಅರೆಬರೆ ಆಗಿರುವುದರಿಂದಾಗಿ ಇಲ್ಲಿಯ ಜನ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net