ಸಮಗ್ರ ಕೃಷಿಯಿಂದ ಆರ್ಥಿಕ ಲಾಭ ಹೆಚ್ಚಳ: ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿಕೆ

Untitled design (3)
ಅಳವಂಡಿಯ ಶ್ರೀ ಸಿದ್ದೇಶ್ವರ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಂಪೂರ್ಣ ಜಲಾನಯನ ಉಪಚಾರ ಕಾರ್ಯಕ್ರಮವನ್ನು ಶಾಸಕ ರಾಘವೇಂದ್ರ ಹಿಟ್ನಾಳ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜಲಾನಯನ ಇಲಾಖೆಯ ಆಯುಕ್ತ ಎಚ್.ಸಿ.ಗಿರೀಶ, ಜೆಡಿ ಟಿ.ಎಸ್.ರುದ್ರೇಶಪ್ಪ, ಡಿಡಿ ಸಹದೇವ ಯರಗೊಪ್ಪ, ಎಡಿಎ ಜೀವನಸಾಬ ಕುಷ್ಟಗಿ ಇದ್ದರು.
Published on

ಅಳವಂಡಿ: ಆರ್ಥಿಕ ಅಭಿವೃದ್ಧಿಗಾಗಿ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.


ಗ್ರಾಮದ ಶ್ರೀ ಸಿದ್ದೇಶ್ವರ ಕಾಲೇಜು ಆವರಣದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ಇಲಾಖೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ದಿ ಯೋಜನೆ, ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಂಪೂರ್ಣ ಜಲಾನಯನ ಉಪಚಾರ ಕಾರ್ಯಕ್ರಮ ಹಾಗೂ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಓಡಿಸ್ಸಾ ಹಾಗೂ ರಾಜ್ಯದ 11 ಜಿಲ್ಲೆಗಳಲ್ಲಿ ರಿವಾರ್ಡ್ ಜಲಾನಯನ ಅಭಿವೃದ್ದಿ ಯೋಜನೆ ಜಾರಿಯಲ್ಲಿದ್ದು, ಅಳವಂಡಿ ಹೋಬಳಿಯ 3 ಗ್ರಾಪಂ ಗ್ರಾಮಗಳಲ್ಲಿಯೂ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆಗೆ ವಿಶ್ವ ಬ್ಯಾಂಕ್ ಶೇ.70 ಹಾಗೂ ರಾಜ್ಯ ಸರ್ಕಾರ ಶೇ.30 ಹಣಕಾಸಿನ ನೆರವು ನೀಡಲಿದೆ.

17 ಕೋಟಿ 65 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. 4,500 ರೈತರು ಇದರ ಫಲಾನುಭವಿಗಳಾಗಿದ್ದು, 5,900 ಹೆಕ್ಟೇರ್ ಜಮೀನಿನಲ್ಲಿ ಕಾಮಗಾರಿ ನಡೆಯಲಿದೆ.

ಈ ಭಾಗದ ರಸ್ತೆ ಸೇತುವೆ ಇತರ ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುವುದು. ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ತಿಳಿಸಲಾಗಿದೆ ಎಂದರು.


ಜಲಾನಯನ ಅಭಿವೃದ್ದಿ ಇಲಾಖೆ ಆಯುಕ್ತ ಎಚ್.ಸಿ.ಗಿರೀಶ ಮಾತನಾಡಿ, ರಿವಾರ್ಡ್ ಜಲಾನಯನ ಅಭಿವೃದ್ದಿ ಯೋಜನೆಯ ಜಾರಿಯಿಂದ ಮಣ್ಣಿನ ಸಂರಕ್ಷಣೆ ಜತೆಗೆ ರೈತರ ಆದಾಯ ದ್ವಿಗುಣಗೊಳ್ಳಲಿದೆ.

ಮಣ್ಣು ಪರೀಕ್ಷೆ ಮಾಡುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳಿಗೆ ತಕ್ಕಂತೆ ಬೆಳೆ ಬೆಳೆಯಲು ಶಿಫಾರಸು ಮಾಡಲಾಗುವುದು. ಇದು ಮಾದರಿ ಯೋಜನೆಯಾಗಿದ್ದು, ಇಲ್ಲಿನ ಅನುಕೂಲತರ ನೋಡಿಕೊಂಡು ಇತರೆಡೆ ವಿಸ್ತರಿಸಲಾಗುವುದು ಎಂದರು.


ಎಡಿಎ ಜೀವನಸಾಬ ಕುಷ್ಟಗಿ, ಎಒ ಪ್ರತಾಪಗೌಡ, ಗೊಬ್ಬರಗುಂಪಿ, ವೀರೇಶ, ಮಾರುತಿ, ಕೃಷಿ ವಿಜ್ಞಾನಿಗಳಾದ ಡಾ.ಸತೀಶಕುಮಾರ, ಡಾ,ಎಂ.ವಿ.ರವಿ, ಡಾ,ರಾಘವೇಂದ್ರ ಎಲಿಗಾರ, ಜೆಡಿ ಟಿ.ಎಸ್.ರುದ್ರೇಶಪ್ಪ, ಡಿಡಿ ಸಹದೇವ ಯರಗೊಪ್ಪ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ವಿರುಪಾಕ್ಷಪ್ಪ, ಪ್ರಮುಖರಾದ ಪರವಿನಬಾನು ಆಲೂರ, ಪಿಎಸ್‌ಐ ನಾಗಪ್ಪ, ಮಾರ್ತಾಂಡಪ್ಪ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net