ಮಿತಿಮೀರಿದ ಯೂರಿಯಾ ಬಳಕೆ: ಜಿಲ್ಲೆಯಲ್ಲಿ ಹೆಚ್ಚಿದ ಬೇಡಿಕೆ

IMG-20200909-WA0069
Published on

ತುಮಕೂರು: ಜಿಲ್ಲೆಯ ಬಹುತೇಕ ಭಾಗದಲ್ಲಿ ಯೂರಿಯಾ ಬೇಡಿಕೆ ಜಾಸ್ತಿಯಾಗುತ್ತಿದೆ, ಉತ್ತಮ ಮಳೆಯ ಕಾರಣಕ್ಕೆ ನಿರೀಕ್ಷೆಗೂ ಮೀರಿ ರಾಗಿ ಬಿತ್ತನೆಯಾಗಿದ್ದು ಉತ್ತಮವಾಗಿ ಬೆಳೆದು ನಿಂತಿದೆ, ಕಳೆ ನಿಯಂತ್ರಣಕ್ಕೆ ವಿಪರೀತವಾಗಿ ಕಳೆನಾಶಕ ಬಳಸಿರುವ ರೈತರು, ರಾಗಿ ಬೆಳೆಸಲು ಯೂರಿಯಾ ಮೊರೆ ಹೋಗಿದ್ದಾರೆ.

ಜಿಲ್ಲೆಯಲ್ಲಿ ಬೇಡಿಕೆಯಿದ್ದ 24 ಸಾವಿರ ಟನ್ ಯೂರಿಯಾ ಗುರಿ ಮೀರಿದ್ದು, 30 ಸಾವಿರ ಟನ್‌ಗಳಷ್ಟು ಪೂರೈಕೆಯಾಗಿದ್ದರೂ ಜನರ ಮೋಹ ಕಡಿಮೆ ಆಗಿಲ್ಲ, ಎಲ್ಲೆಡೆಯೂ ಜನರು ಸಾಲುಗಟ್ಟಿ ಯೂರಿಯಾ ಕೊಳ್ಳುತ್ತಿರುವುದು ಕೃಷಿ ಇಲಾಖೆ ಅಧಿಕಾರಿಗಳ ತಲೆ ನೋವು ಹೆಚ್ಚಿಸಿದೆ.

ಜಿಲ್ಲೆಯಲ್ಲಿ ಖಾಸಗಿ ಮಾರಾಟಗಾರರು ಯೂರಿಯಾ ಕೃತಕ ಅಭಾವ ಸೃಷ್ಟಿಸುವ ಜತೆಗೆ ದರ ಹೆಚ್ಚಿಸಿ ರೈತರನ್ನು ವಂಚಿಸುತ್ತಿದ್ದಾರೆ ಎಂಬ ದೂರು ಸಾರ್ವತ್ರಿಕವಾಗಿದ್ದು ಕೃಷಿ ಇಲಾಖೆ ಅಧಿಕಾರಿಗಳು ಕೆಲವು ಕಡೆ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ.

ರಸಗೊಬ್ಬರದ ಮಿತಿಮೀರಿದ ಬಳಕೆ: ರೈತರು ರಾಸಾಯನಿಕಗಳ ವಿಪರೀತ ಬಳಕೆಯಲ್ಲಿ ತೊಡಗಿರುವುದು ಆತಂಕಕ್ಕೀಡುಮಾಡಿದೆ. ಕೃಷಿ ಭೂಮಿಗಳು ಕೊಟ್ಟಿಗೆ ಗೊಬ್ಬರವಿಲ್ಲದೆ ಲವತ್ತತೆ ಕಳೆದುಕೊಂಡಿದ್ದು ಬೆಳೆ ಹಸಿರಾಗಲು ಯೂರಿಯಾ ಮೊರೆ ಹೋಗುವಂತಾಗಿದೆ.

ಯಾಂತ್ರಿಕ ಕೃಷಿಕಡೆಗೆ ವಾಲಿರುವ ಆಧುನಿಕ ರೈತರು ಹೊಲದಲ್ಲಿ ಕಳೆ ನಿಯಂತ್ರಣಕ್ಕೂ ವಿಪರೀತವಾಗಿಯೇ ಕಳೆನಾಶಕ ಬಳಸಿದ್ದು ಭವಿಷ್ಯದಲ್ಲಿ ಭೂಮಿ ಸತ್ವ ಕಳೆದುಕೊಂಡು ಬರಡಾಗುವ ಅಪಾಯವಿದೆ.

ಸಾವಯವ ಕೃಷಿಯ ಮಹತ್ವದ ಬಗ್ಗೆ ಸರ್ಕಾರ ಮಾತನಾಡಿ, ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದರೂ ಪ್ರಯೋಜನವಾಗಿಲ್ಲ, ಕೃಷಿ ಇಲಾಖೆಯೇ ಕಳೆದ ಐದು ವರ್ಷದಿಂದ ತರಬೇತಿ ನೀಡಿರುವ ಸಾವಯವ ಗ್ರಾಮಗಳಲ್ಲಿಯೇ ರಾಸಾಯನಿಕ ಬಳಕೆ ಜಾಸ್ತಿಯಾಗಿದೆ.

ರಾಸಾಯನಿಕಗಳ ಬಳಕೆ ದುಷ್ಪರಿಣಾಮ ಹಾಗೂ ಸಾವಯವದ ಲಾಭ ತಿಳಿಸುವಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ತೋರಿದ ನಿರ್ಲಕ್ಷ್ಯವೇ ರೈತರು ಅವೈಜ್ಞಾನಿಕವಾಗಿ ರಾಸಾಯನಿಕಕ್ಕೆ ಮುಗಿಬೀಳಲು ಕಾರಣ ಎಂದು ರೈತರು ಬೇಸರಿಸಿದ್ದಾರೆ.

ಹೊಲದಲ್ಲಿ ಕಳೆನಾಶಕ ಹಾಗೂ ರಸಗೊಬ್ಬರದ ಅತಿಯಾದ ಬಳಕೆಯಿಂದ ಇರುವೆ ಸಹಿತ ಯಾವ ಜೀವ ಸಂಕುಲವೂ ಉಳಿಯುತ್ತಿಲ್ಲ, ರೈತರು ತಿನ್ನುತ್ತಿದ್ದ ಸೊಪ್ಪು ಕೂಡ ಇಲ್ಲ. ರಾಗಿ ಮಾತ್ರ ಆಳುದ್ದ ಬೆಳೆದು ಹಚ್ಚಹಸಿರಾಗುತ್ತಿದ್ದು ತಾತ್ಕಾಲಿಕ ಖುಷಿ ನೀಡಿದೆ. ಭವಿಷ್ಯದಲ್ಲಿ ಭೂಮಿ ಉಳಿಯುವುದೇ ಅನುಮಾನವಾಗಿದ್ದು ಸರ್ಕಾರದ ಇಲಾಖೆಗಳು ಇದ್ದೂ ಅನುಪಯುಕ್ತವಾಗಿದೆ. ಸ್ವಾಮಿನಾಥ್ ರೈತ, ಹಾಗಲವಾಡಿ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ರಾಗಿ ಬೆಳೆಯಲಾಗಿದ್ದು ಯೂರಿಯಾ ನಿರಂತರವಾಗಿ ಬರುತ್ತಿದ್ದರೂ ಎಲ್ಲೆಡೆ ಬೇಡಿಕೆಯಿದೆ, ಇದೇ ತಿಂಗಳು 6 ಸಾವಿರ ಟನ್ ಬರಲಿದೆ. ರೈತರು ಅನಗತ್ಯವಾಗಿ ರಾಸಾಯನಿಕ ಬಳಸುವುದ್ನು ನಿಲ್ಲಿಸಬೇಕು, ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆಯಬೇಕು. ರಾಜಸುಲೋಚನ ಜಂಟಿ ಕೃಷಿ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net