

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಗಣೇಶ ಚತುರ್ಥಿಗೆ ಇನ್ನೊಂದು ವಾರ ಬಾಕಿಯಿದೆ. ಗಣಪತಿ ತಯಾರಿಸುವ ಕಲಾವಿದರು ಸದ್ಯ ಬಿಜಿಯಾಗಿದ್ದಾರೆ. ಪಿಒಪಿ ಗಣಪತಿ ಸಂಪೂರ್ಣ ಬ್ಯಾನ್ ಮಾಡಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಈ ಬಾರಿ ಮಣ್ಣಿನ ಗಣಪತಿ ಮೂರ್ತಿಗಳಿಗೆ ಬೇಡಿಕೆ ಕುದುರಿದೆ.
ಗಣಪತಿ ಮೂರ್ತಿ ತಯಾರಿಕರಿಗೆ ಕೈ ತುಂಬ ಕೆಲಸ. ಹಿಂದಿನಿಂದಲೂ ನೈಸರ್ಗಿಕ ಗಣಪತಿ ಮಾಡಿಕೊಂಡು ಬಂದಿರುವ ಕಲಾವಿದರು ಬಿಡುವಿಲ್ಲದಂತೆ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಮೂರ್ತಿಗಳನ್ನು ವಿಸರ್ಜನೆ ಮಾಡುವ ಬಾವಿ, ಕೆರೆಯ ನೀರು, ಪರಿಸರ ಹಾಳಾಗದಂತೆ ಮೂರ್ತಿಗಳಿಗೆ ನೀರಿನ ಬಣ್ಣ ಬಳಿಸಿ ಸಿಂಗರಿಸಲಾಗುತ್ತಿದೆ. ಪುಣೆಯ ದಗೂಡುಶೇಟ್, ಹಾವಿನ ಮೇಲೆ, ಬಸವಣ್ಣನ ಮೇಲೆ ಕುಳಿತ ಗಣಪತಿ, ಗೌರಿ-ಗಣೇಶ, ಸಾಯಿಬಾಬಾ, ಕೃಷ್ಣನ ಅವತಾರ, ಬ್ರಹ್ಮನ ಸ್ವರೂಪ ಸೇರಿ ವಿವಿಧ ಮೂರ್ತಿಗಳು ರೂಪುಗೊಳ್ಳುತ್ತಿವೆ. ನಗರದ ಕುರುಬಗೇರಿ, ಮಾರುತಿ ನಗರ ಸೇರಿ ವಿವಿಧೆಡೆ ನೈಸರ್ಗಿಕ ಗಣಪತಿ ತಯಾರಿಸಲಾಗುತ್ತಿದ್ದು, ಗ್ರಾಹಕರು ಈಗಾಗಲೇ ತಮಗೆ ಇಷ್ಟವಾದ ಗಣಪತಿ ಮೂರ್ತಿ ಆಯ್ಕೆ ಮಾಡಿ, ಮುಂಗಡವಾಗಿ ಹಣ ಕೊಟ್ಟು ಕಾಯ್ದಿರಿಸುತ್ತಿದ್ದಾರೆ.
ಮಣ್ಣು, ಕಚ್ಚಾ ವಸ್ತು ಸೇರಿ ಪ್ರತಿಯೊಂದು ವಸ್ತುಗಳನ್ನು ಖರೀದಿಸಬೇಕು. ವರ್ಷದಿಂದ ವರ್ಷಕ್ಕೆ ಗಣಪತಿ ತಯಾರಿಸುವ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಗಣಪತಿ ತಯಾರಿಸಲು ಖರ್ಚು ಹೆಚ್ಚುತಲೇ ಇದೆ. ಆದರೆ, ಮಾರುಕಟ್ಟೆಯಲ್ಲಿ ಒಂದು ಗಣಪತಿ 500 ರೂ.ನಿಂದ 1 ಸಾವಿರ ರೂ.ವರೆಗೆ ಮಾರಾಟ ಮಾಡುತ್ತಿದ್ದೇವೆ. ಈ ಬೆಲೆಗೆ ಮಾರಾಟ ಮಾಡಿದರೆ, ಖರ್ಚು ಮಾಡಿದ ಹಣಕ್ಕೆ ಸರಿಯಾಗುತ್ತದೆ. ಉಳಿತಾಯ ಕಡಿಮೆ ಎಂಬುದು ಕಲಾವಿದರ ಅಳಲು.
ಸದ್ಯ ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಪಿಒಪಿ ಗಣಪತಿ ಮೂರ್ತಿ ಮಾರಾಟ ಮಾಡುತ್ತಿಲ್ಲ. ಆದರೆ, ಹಬ್ಬ ಎರಡ್ಮೂರು ದಿನ ಇರುವಾಗ ಕೆಲವರು ರಾಣೆಬೆನ್ನೂರ ನಗರ, ಕುಮಾರಪಟ್ಟಣ ಸೇರಿ ವಿವಿಧ ಭಾಗದಲ್ಲಿ ಅನಧಿಕೃತವಾಗಿ ಪಿಒಪಿ ಗಣಪತಿ ತಂದು ಮಾರಾಟ ಮಾಡುತ್ತಾರೆ. ಇಂಥವರ ವಿರುದ್ಧ ನಗರಸಭೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂದಾಗ ಮಣ್ಣಿನ ಗಣಪತಿ ಮಾರಾಟಗಾರರಿಗೆ ಬೆಲೆ ದೊರೆಯಲಿದೆ ಎಂಬುದು ನೈಸರ್ಗಿಕ ಗಣಪತಿ ತಯಾರಕರ ಒತ್ತಾಯವಾಗಿದೆ.
ಪಿಒಪಿ ಗಣಪತಿ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಸ್ಥಳೀಯ ಮಣ್ಣಿನ ಗಣಪತಿ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಸದ್ಯ ಜನರಿಂದ ಉತ್ತಮ ಸ್ಪಂದನೆಯಿದೆ. ಕಚ್ಚಾ ವಸ್ತುಗಳನ್ನು ತರಲು ಈ ಬಾರಿ ಹಣ ಹೆಚ್ಚು ಖರ್ಚಾಗಿದೆ. ಹೀಗಾಗಿ ಪ್ರತಿ ಗಣಪತಿ ಮೇಲೆ 200 ರೂ. ಹೆಚ್ಚಿಗೆ ಮಾಡಿದರೂ ಉಳಿತಾಯ ಕಡಿಮೆಯಾಗಿದೆ.I ರಾಘವೇಂದ್ರ, ನೈಸರ್ಗಿಕ ಗಣಪತಿ ತಯಾರಕ ನಗರದೆಲ್ಲೆಡೆ ಎಲ್ಲರೂ ಕಡ್ಡಾಯವಾಗಿ ಮಣ್ಣಿನ ಹಾಗೂ ನೈಸರ್ಗಿಕ ಬಣ್ಣ ಬಳಸಿ ತಯಾರಿಸಿದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಬೇಕು. ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇಲ್ಲವಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ. I ನಿಂಗಪ್ಪ ಕುಮ್ಮಣ್ಣನವರ, ನಗರಸಭೆ ಆಯುಕ್ತ
ಪೋಟೋ ಪೈಲ್‌ನೇಮ10ಎಸ್.ಜಿ.ಎನ್.3.ಶಿಗ್ಗಾಂವಿ.