

ಮೈಸೂರು: ವೈದ್ಯಕೀಯ ಕ್ಷೇತ್ರ ವಿಸ್ತಾರವಾಗುತ್ತಿದ್ದು, ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಕೇರಳದ ಕೋಲ್ಜಿಕೋಡ್‌ನ ಬೇಬಿ ಮೆಮೋರಿಯಲ್ ಆಸ್ಪತ್ರೆ ಶುಶ್ರೂಷ ಸೇವೆಗಳ ವಿಭಾಗದ ಮುಖ್ಯಸ್ಥೆ ಡಾ.ಎಲಿಜಬೆತ್ ವರ್ಕಿ ತಿಳಿಸಿದರು.
ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನಿಂದ ನಗರದ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬೇಸಿಕ್ ಬಿಎಸ್‌ಸಿ ನರ್ಸಿಂಗ್‌ನ 28ನೇ ತಂಡದ ವಿದ್ಯಾರ್ಥಿಗಳ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೀರ್ಘಕಾಲದ ಕಾಯಿಲೆಗಳ ಹೆಚ್ಚಳ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಂತಹ ಜಾಗತಿಕ ಆರೋಗ್ಯ ಬಿಕ್ಕಟ್ಟಿನಿಂದ ಅರ್ಹ ಶುಶ್ರೂಷಕರ ಕೊರತೆಯನ್ನು ಜಗತ್ತು ಎದುರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಜಗತ್ತಿಗೆ ನುರಿತ ಮತ್ತು ಸಮರ್ಪಿತ ನರ್ಸಿಂಗ್‌ಗಳ ತುರ್ತು ಅಗತ್ಯವಿದೆ. ನರ್ಸಿಂಗ್ ವಿದ್ಯಾರ್ಥಿಗಳು ಹಾಕುತ್ತಿರುವ ಹೆಜ್ಜೆ ಉದಾತ್ತ ಜವಾಬ್ದಾರಿ ಮತ್ತು ಜಾಗತಿಕ ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ರೋಗಿಗಳ ಸೇವೆಯಲ್ಲಿ ಸಮರ್ಪಣೆಯಿಂದ ತೊಡಗಿಸಿಕೊಳ್ಳುವ ನರ್ಸಿಂಗ್ ಸೇವೆ ಅತ್ಯಂತ ಮನ್ನಣೆ ಪಡೆದಿದೆ. ಇಂತಹ ಉದ್ಯೋಗಕ್ಕೆ ವಿಶ್ವದ ಎಲ್ಲೆಡೆ ಮನ್ನಣೆ ಇದ್ದು, ಬೇಡಿಕೆಯೂ ಹೆಚ್ಚಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಹೊಸ ಆವಿಷ್ಕಾರಗಳು ಅಗುತ್ತಿದ್ದು, ವಿಸ್ತಾರಣೆಗೊಂಡಿದೆ. ಇದರಿಂದ ಜಾಗತಿಕವಾಗಿ ನರ್ಸಿಂಗ್ ವಿದ್ಯಾರ್ಥಿಗಳ ಬೇಡಿಕೆಯು ಹೆಚ್ಚಾಗುತ್ತಿದೆ. ನರ್ಸಿಂಗ್ ವಿದ್ಯಾರ್ಥಿಗಳು ಶಿಕ್ಷಣ ಮುಗಿದ ನಂತರ, ಸಹಾನುಭೂತಿ, ಬದ್ಧತೆ ಮತ್ತು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ವೈದ್ಯರಂತೆ ಶುಶ್ರೂಷಕರು ಕೂಡ ಸೇವೆ ಸಲ್ಲಿಸಿ, ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ರೋಗಿಗಳ ಆರೈಕೆ, ಆರೋಗ್ಯ ಶಿಕ್ಷಣ ಮತ್ತು ಸಮುದಾಯದ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಮರಣ ಸಂಚಿಕೆ ಬಿಂಬ ಬಿಡುಗಡೆಗೊಳಿಸಲಾಯಿತು. ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು, ಆಸ್ಪತ್ರೆಯ ಶುಶ್ರೂಷ ಸೇವೆಗಳ ವಿಭಾಗದ ಮುಖ್ಯಸ್ಥೆ ಜಾನೆಟ್ ಮೆಥಾಯಸ್ ಇತರರು ಇದ್ದರು.