

ಮಂಜುನಾಥ ತಿಮ್ಮಯ್ಯ ಮೈಸೂರು
ಜಿಲ್ಲೆಯಲ್ಲಿ ಪದವಿ ಕಾಲೇಜುಗಳ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಸೀಟ್ ದೊರೆಯದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ.
ದ್ವಿತೀಯ ಪಿಯುಗೆ ಪ್ರಸಕ್ತ ವರ್ಷದಿಂದ ಮೂರು ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣತೆಯ ಪ್ರಮಾಣ ಶೇ.90 ದಾಟುವ ಸಾಧ್ಯತೆ ಇದೆ. ಆದರೆ, ತೇರ್ಗಡೆಯ ಪ್ರಮಾಣಕ್ಕೆ ತಕ್ಕಂತೆ ಅಗತ್ಯ ಕೋರ್ಸ್‌ಗಳಿಗೆ ಪದವಿ ಕಾಲೇಜುಗಳಿಲ್ಲದೆ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಪರದಾಡುವಂತಾಗಿದೆ.
ಉಳಿದ 2, 3ನೇ ವಾರ್ಷಿಕ ಪರೀಕ್ಷಾ ಫಲಿತಾಂಶ ಬಳಿಕ ಉತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಆಗ ದಾಖಲಾತಿಗೆ ಇನ್ನಷ್ಟು ಒತ್ತಡ ಹೆಚ್ಚಾಗುವುದು ನಿಶ್ಚಿತ.
ಫಲಿತಾಂಶದಲ್ಲಿ ಹೆಚ್ಚಳ, ಪ್ರವೇಶಕ್ಕೆ ಒತ್ತಡ: ಈ ಸಲ ದ್ವಿತೀಯ ಪಿಯು ಫಲಿತಾಂಶ ಹೆಚ್ಚಳವಾಗಿರುವುದು ಪದವಿ ಕಾಲೇಜುಗಳ ಪ್ರವೇಶಕ್ಕೆ ಬೇಡಿಕೆ ಅಧಿಕವಾಗಲು ಮುಖ್ಯ ಕಾರಣ. ಕಳೆದ ಸಾಲಿನಲ್ಲಿ ಮೈಸೂರು ಜಿಲ್ಲಾ ಫಲಿತಾಂಶ ಶೇ.79.89ರಷ್ಟಾಗಿತ್ತು. ಈ ಸಲ ಶೇ.83.13ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಫಲಿತಾಂಶದಲ್ಲಿ ಏರಿಕೆಯಾಗಿದೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಿಂದ 30,756 ವಿದ್ಯಾರ್ಥಿಗಳ ಪೈಕಿ 25,566 ಜನ ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗಿಂತ ಶೇ.3.24ರಷ್ಟು ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ 6,550ರಲ್ಲಿ 4,563 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.69.66ರಷ್ಟು ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 10,341ರಲ್ಲಿ 8,706 ವಿದ್ಯಾರ್ಥಿಗಳು ಪಾಸಾಗಿ ಶೇ.84.19ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 13,865ರಲ್ಲಿ 12,297 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.88.69ರಷ್ಟು ಫಲಿತಾಂಶ ಲಭಿಸಿದೆ.
ಹೆಚ್ಚಿನ ಅವಕಾಶಗಳಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಂತಹ ಸಮಸ್ಯೆ ಎದುರಾಗುವುದಿಲ್ಲ. ಆದರೆ ಕಲಾ, ವಾಣಿಜ್ಯ ವಿಭಾಗದ ಬಹುತೇಕ ವಿದ್ಯಾರ್ಥಿಗಳು ಪದವಿ ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ. ಈ ಎರಡೂ ವಿಭಾಗದ 13,269 ವಿದ್ಯಾರ್ಥಿಗಳಿಗೆ ಸೀಟು ಕಲ್ಪಿಸಿಕೊಡುವುದು ಇದೀಗ ದೊಡ್ಡ ಸವಾಲಾಗಿದೆ.
ಜಿಲ್ಲೆಯಲ್ಲಿ 24 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 15 ಅನುದಾನಿತ ಕಾಲೇಜು, 55 ಖಾಸಗಿ ಪದವಿ ಕಾಲೇಜುಗಳಿವೆ. ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಮಹಾರಾಜ, ಸಂಜೆ ಕಾಲೇಜು, ಲಲಿತ ಕಲಾ ಕಾಲೇಜು, ದೈಹಿಕ ಶಿಕ್ಷಣ ಕಾಲೇಜು ಸೇರಿದಂತೆ 4 ಕಾಲೇಜುಗಳು, 1 ಯುವರಾಜ ಕಾಲೇಜು(ಸ್ವಾಯತ್ತ) ಇದೆ. ಪ್ರಾದೇಶಿಕ ಶಿಕ್ಷಣ ಸಂಸ್ಥೆಯ(ಆರ್‌ಐಇ) ಅಧೀನದಲ್ಲಿ 2 ಪದವಿ ಕಾಲೇಜುಗಳು, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವ್ಯಾಪ್ತಿಯಲ್ಲಿ 2 ಕಾಲೇಜು, ಸಿಎಫ್‌ಟಿಆರ್‌ಐ ಸಂಸ್ಥೆ ವ್ಯಾಪ್ತಿಯಲ್ಲಿ 1 ಪದವಿ ಕಾಲೇಜು ಇದೆ. ಈ ಪೈಕಿ ಕಲಾ, ವಾಣಿಜ್ಯ ವಿಜ್ಞಾನದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಪದವಿ ಕಾಲೇಜುಗಳತ್ತ ಮುಖ ಮಾಡಿದ್ದು, ಇಲ್ಲಿ ಪ್ರವೇಶಕ್ಕಾಗಿ ಪೈಪೋಟಿ ಹೆಚ್ಚಾಗಿದೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯ ಇರುವ ಕಾರಣ ಪ್ರವೇಶಕ್ಕೆ ವಿಪುಲ ಅವಕಾಶಗಳಿವೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅಖಿಲ ಭಾರತ ಮಟ್ಟದಲ್ಲಿ ನಡೆದಿರುವುದರಿಂದ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.
ವೈದ್ಯಕೀಯ ಶಿಕ್ಷಣ ಹೊರತುಪಡಿಸಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯನ್ನು ವಿದ್ಯಾರ್ಥಿಗಳು ಬರೆದಿದ್ದಾರೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮಾ, ಡಿ ಫಾರ್ಮಾ ಹಾಗೂ ನರ್ಸಿಂಗ್ ಕೋರ್ಸ್‌ಗಳಿಗೆ ದಾಖಲಾಗುತ್ತಾರೆ. ಹೀಗಾಗಿ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯಲಿದೆ.
ವಾಣಿಜ್ಯ ಹಾಗೂ ಕಲಾ ವಿಷಯಗಳಲ್ಲಿ ಕಾಲೇಜುಗಳು ಹಾಗೂ ಬೋಧಕರ ಕೊರತೆ ಇದೆ. ಕಳೆದ ವರ್ಷದಿಂದ ಬಹುತೇಕ ಸರ್ಕಾರಿ ಕಾಲೇಜುಗಳ ಕಲಾ ವಿಭಾಗದಲ್ಲೂ ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡುವ ಪ್ರಕ್ರಿಯೆ ಶುರುವಾಗಿದೆ. ಇದರಿಂದ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ತಮ್ಮ ಸಮೀಪದ ಕಾಲೇಜುಗಳಲ್ಲಿ ಪ್ರವೇಶ ಸಿಗದೆ ಪರದಾಡಿದ್ದರು. ಈ ಬಾರಿ ಸಮಸ್ಯೆ ಇನ್ನಷ್ಟು ಉಲ್ಬಣವಾಗಿದೆ. ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ ಇಳಿಕೆಯಾಗುತ್ತಿದೆ. ಹೆಚ್ಚು ಅಂಕ ಗಳಿಸುವ ಪ್ರತಿಭಾವಂತರು ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಮತ್ತಿತರ ವೃತ್ತಿಪರ ಕೋರ್ಸ್‌ಗಳತ್ತ ಚಿತ್ತ ಹರಿಸಿದರೆ, ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಕನಿಷ್ಠ ಪದವಿ ಶಿಕ್ಷಣವನ್ನಾದರೂ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚು ಮಾಡಲು ಅವಕಾಶ ಇದೆ. ಆದರೆ ವಿದ್ಯಾರ್ಥಿಗಳಿಗೆ ಸಂಖ್ಯೆಗೆ ತಕ್ಕಷ್ಟು ಕೊಠಡಿ ಸೇರಿದಂತೆ ಮೂಲಸೌಕರ್ಯ ಒದಗಿಸುವುದೇ ದೊಡ್ಡ ಸವಾಲು. ಪದವಿ ಕಾಲೇಜುಗಳ ಪ್ರವೇಶ ಸಂಖ್ಯೆ ಹೆಚ್ಚಿಸುವ ಜತೆಗೆ ಮೂಲಸೌಕರ್ಯ, ಬೋಧಕ-ಬೋಧಕೇತರ ಸಿಬ್ಬಂದಿ ನೇಮಕವಾಗಬೇಕು. ಈಗ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಪಾಠ ಮಾಡಬೇಕಿದೆ ಎಂದು ಪ್ರಾಧ್ಯಾಪಕರೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.
ಪದವಿ ಕಾಲೇಜು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದವರ ಪೈಕಿ ಯುವತಿಯರು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು. ಈ ಸಲ 18,308ರ ಪೈಕಿ 15,653 ವಿದ್ಯಾರ್ಥಿನಿಯರು (ಶೇ.85.50) ಪಾಸಾಗಿದ್ದಾರೆ. 15,568ರಲ್ಲಿ 11,188 ಯುವಕರು(ಶೇ.71.87) ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ ಶೇ.83.98, ಗ್ರಾಮಾಂತರ ಪ್ರದೇಶದ ಶೇ.77.16ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ನಗರ ವಾಸಿಗಳು ವೃತ್ತಿ ಶಿಕ್ಷಣ ಕಡೆ ಆಸಕ್ತಿ ತೋರಿದ್ದರೆ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು, ಅದರಲ್ಲೂ ಯುವತಿಯರು ಕಲಾ, ವಾಣಿಜ್ಯ ಕೋರ್ಸ್‌ಗಳತ್ತ ಗಮನ ಕೊಡುತ್ತಾರೆ. ಇದರಿಂದಾಗಿ ಸರ್ಕಾರಿ ಪದವಿ ಕಾಲೇಜುಗಳ ಮೇಲೆ ಒತ್ತಡ ದ್ವಿಗುಣಗೊಂಡಿದೆ.
ನಮ್ಮ ಕಾಲೇಜಿನ ಪ್ರವೇಶಾತಿಗೆ ಹೆಚ್ಚಿನ ಬೇಡಿಕೆ ಇದೆ. ಬಿ.ಕಾಂ 1 ಸಾವಿರ, ಬಿಬಿಎ 300, ಬಿಸಿಎ 120 ಸೀಟುಗಳಿವೆ. ಬಿ.ಕಾಂಗೆ ಅರ್ಜಿ ಸಲ್ಲಿಸಿದ 90ರಷ್ಟು ಜನರಿಗೆ ಸೀಟು ದೊರೆಯಲಿದೆ. ಮೈಸೂರು ವಿವಿಯೊಂದಿಗೆ ಚರ್ಚೆ ಮಾಡಿ ಸೀಟುಗಳನ್ನು ಹೆಚ್ಚಳ ಮಾಡಿಕೊಳ್ಳಬಹುದು. ಆದರೆ ಬಿಬಿಎ, ಬಿಸಿಎ ಸೀಟು ಹೆಚ್ಚಳ ಸಾಧ್ಯವಿಲ್ಲ. ಈ ಕೋರ್ಸ್‌ಗಳ ಸೀಟು ಪಡೆಯಲು ತೀವ್ರ ಪೈಪೋಟಿ ಇದೆ. ಸೋಮಣ್ಣ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಪಡುವಾರಹಳ್ಳಿ