ಬಟರ್‌ಫ್ರೂಟ್‌ಗೆ ಹೆಚ್ಚಿದ ಬೇಡಿಕೆ ಬೆಲೆಯೂ ದುಬಾರಿ

Increased demand for butterfruit also makes the price expensive
Published on

ಮಡಿಕೇರಿ:

ಬೇಸಿಗೆಯ ಬಿಸಿಲು ಕಾವೇರುತ್ತಿದ್ದಂತೆಯೇ ಬಟರ್‌ಫ್ರೂಟ್‌ಗೆ ಬೇಡಿಕೆ ಹೆಚ್ಚಾಗಿದೆ. ಮಿಲ್ಕ್‌ಶೇಕ್ ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿಯೂ ಬಳಕೆಯಾಗುವ ಬೆಣ್ಣೆಹಣ್ಣನ್ನು ವ್ಯಾಪಾರಸ್ಥರು ತೋಟಗಳಿಗೆ ತೆರಳಿ ತಾವೇ ಕೊಯ್ಲು ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ಎಷ್ಟು ಫಸಲು ಇದ್ದರೂ ಖರೀದಿಸಲು ವ್ಯಾಪಾರಸ್ಥರು ತಯಾರಿದ್ದರೂ ಬೇಡಿಕೆಯಷ್ಟು ಪ್ರಮಾಣದಲ್ಲಿ ಅವಾಕಡೋ ಲಭ್ಯವಾಗುತ್ತಿಲ್ಲ. ಉತ್ತಮ ಗುಣಮಟ್ಟದ ಬಟರ್‌ಫ್ರೂಟ್‌ಗೆ ಬೆಳೆಗಾರರು ತಮ್ಮ ತೋಟದಲ್ಲೇ ಕೆಜಿಗೆ ಗರಿಷ್ಠ ೨೦೦ ರೂ. ಬೆಲೆ ಪಡೆದುಕೊಳ್ಳುತ್ತಿದ್ದಾರೆ.

ಬಟರ್‌ಫ್ರೂಟ್ ಎಂದು ಜನಸಾಮಾನ್ಯರಲ್ಲಿ ಪರಿಚಯ ಆಗಿರುವ ಅವಾಕಡೋದ ಕೆಲವು ತಳಿಗಳು ವರ್ಷದಲ್ಲಿ ೨ ಫಸಲು ಕೊಡುತ್ತವೆ. ಮತ್ತೆ ಕೆಲವು ತಳಿಗಳು ಮಳೆಗಾಲದಲ್ಲಿ ಮಾತ್ರ ಗಿಡದ ತುಂಬಾ ಕಾಯಿ ಬಿಟ್ಟು ಗಮನ ಸೆಳೆಯುತ್ತವೆ. ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಣ್ಣೆಹಣ್ಣು ಮಾರುಕಟ್ಟೆಗೆ ಬರುವುದರಿಂದ ಬೇಡಿಕೆ ಅಷ್ಟಾಗಿ ಇರುವುದಿಲ್ಲ. ’ಫ್ರೀ ಕೊಟ್ಟರೂ ತೆಗೆದುಕೊಂಡು ಹೋಗುವವರಿಲ್ಲ’ ಎಂದು ಗ್ರಾಮೀಣರು ಆಡಿಕೊಳ್ಳುವ ಮಟ್ಟಿಗೆ ಬಟರ್‌ಫ್ರೂಟ್ ಮಾರುಕಟ್ಟೆ ಕಳೆದುಕೊಂಡಿರುತ್ತದೆ. ವ್ಯಾಪಾರಿಗಳು ಅತ್ಯುತ್ತಮ ಗುಣಮಟ್ಟದ ಹಣ್ಣುಗಳನ್ನಷ್ಟೇ ಖರೀದಿಸುವ ಮನಸ್ಸು ಮಾಡುತ್ತಾರೆ. ಈ ಅವಧಿಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳಿಗೆ ಕೆಜಿಗೆ ೨೦-೩೦ ರೂ. ಸಿಕ್ಕಿದರೂ ಹೆಚ್ಚು ಎನ್ನುವಂತಿರುತ್ತದೆ.

ವರ್ಷದಲ್ಲಿ ೨ ಬಾರಿ ಫಸಲು ಕೊಡುವ ಬಟರ್ ಫ್ರೂಟ್ ತಳಿಗಳಲ್ಲಿ ಈಗ ಹಣ್ಣು ಕಟಾವಿಗೆ ಬಂದಿದೆ. ಇದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲೂ ಒಳ್ಳೆಯ ಬೇಡಿಕೆ ಇದೆ. ಹಣ್ಣಿನ ಗಾತ್ರ, ಆಕಾರ ಹೇಗೆ ಇದ್ದರೂ ಮರದಲ್ಲಿ ಒಂದನ್ನೂ ಬಿಡದಂತೆ ವ್ಯಾಪಾರಿಗಳು ಕೊಯ್ಲು ಮಾಡುವುದು ಕಂಡುಬರುತ್ತದೆ. ಕೆಜಿಗೆ ಕನಿಷ್ಠ ೧೦೦ ರೂ.ನಿಂದ ಗರಿಷ್ಠ ೨೦೦ ರೂ. ತನಕ ಬೆಲೆ ನಿಗದಿ ಮಾಡುತ್ತಿದ್ದು, ವ್ಯಾಪಾರಿಗಳು ಮರದಿಂದ ತಾವೇ ಹಣ್ಣು ಕಿತ್ತು ಸ್ಥಳದಲ್ಲೇ ತೂಕ ಹಾಕಿ ಅಲ್ಲಿಯೇ ಬೆಳೆಗಾರರಿಗೆ ಹಣ ಚುಕ್ತಾ ಮಾಡುತ್ತಿದ್ದಾರೆ.

ಒಂದು ಮರದಲ್ಲಿ ಒಮ್ಮೆಗೆ ಬೆಳೆದ ಕಾಯಿಗಳು ಸಿಗುವುದಿಲ್ಲ. ಹಾಗಾಗಿ ಬಲಿತ ಕಾಯಿಗಳು ಸಿಗುತ್ತಿದ್ದಂತೆಯೇ ಕೊಯ್ಲು ನಡೆಯುತ್ತಿರುತ್ತದೆ. ಬೆಣ್ಣೆಹಣ್ಣುವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಇರುವುದರಿಂದ ವ್ಯಾಪಾರಿಗಳಲ್ಲೂ ಪೈಪೋಟಿ ಕಂಡುಬರುತ್ತಿದೆ. ಬೆಣ್ಣೆ ಹಣ್ಣುಗಳು ಕೊಯ್ಲಿಗೆ ಬಂದಿರುವ ತೋಟಗಳನ್ನು ಗುರುತಿಸಿ, ಮೊದಲೇ ಬೆಲೆ ಬಗ್ಗೆ ಮಾತನಾಡಿ ಮುಂಗಡ ಪಾವತಿಸಿ ಫಸಲನ್ನು ಕಾಯ್ದಿರಿಸುವುದು ಸಾಮಾನ್ಯ ಬೆಳವಣಿಗೆ ಆಗಿದೆ. ಹಣ್ಣಿರುವ ತೋಟವನ್ನು ತೋರಿಸಿ, ವ್ಯವಹಾರ ಕುದುರಿಸಿಕೊಟ್ಟು ಕಮಿಷನ್ ಗಿಟ್ಟಿಸಿಕೊಳ್ಳುವ ದಲ್ಲಾಳಿಗಳೂ ಹುಟ್ಟಿಕೊಂಡಿದ್ದಾರೆ.

ವ್ಯಾಪಾರಿಗಳು ನೀಡುವ ಮಾಹಿತಿ ಪ್ರಕಾರ ಕೊಯ್ಲು ಮಾಡಿರುವ ಹಣ್ಣನ್ನು ಗಾತ್ರ, ಆಕಾರ, ತೂಕ, ಬಣ್ಣ ಹಾಗೂ ಸಿಪ್ಪೆಯ ಹೊಳಪಿನ ಆಧಾರದಲ್ಲಿ ಮೊದಲು ಗುಣಮಟ್ಟ ನಿರ್ಧರಿಸುತ್ತಾರೆ. ಇದರ ಮೇಲೆ ಬೆಲೆಯೂ ನಿರ್ಧಾರ ಆಗುತ್ತದೆ. ಇದ್ದುದರಲ್ಲೇ ಅತ್ಯುತ್ತಮ ಗುಣಮಟ್ಟದ ಹಣ್ಣನ್ನು ರಫ್ತು ಉದ್ದೇಶಕ್ಕೆ ಮುಂಬೈಗೆ ಕಳಿಸಲಾಗುತ್ತದೆ. ಉಳಿದ ಹಣ್ಣುಗಳನ್ನು ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಿಗೆ ಕಳುಹಿಸಿಕೊಡಲಾಗುತ್ತದೆ. ಕೆಲವು ತಳಿಗಳ ಬೆಣ್ಣೆಹಣ್ಣುಗಳನ್ನು ೧೫ ದಿನಗಳಿಗಿಂತಲೂ ಹೆಚ್ಚು ಕಾಲ ಕಿತ್ತಿಟ್ಟರೂ ಹಾಳಾಗುವುದಿಲ್ಲ. ಇಂಥ ಹಣ್ಣುಗಳು ದೂರದ ಪ್ರದೇಶಕ್ಕೆ ರವಾನೆ ಆಗುತ್ತದೆ.

ಬಟರ್‌ಫ್ರೂಟ್‌ಗಳು ಅವುಗಳ ತಳಿಗಳನ್ನು ಅವಲಂಬಿಸಿ ತಲಾ ೩೦೦ ಗ್ರಾಂನಿಂದ ಸುಮಾರು ೧.೫ ಕೆ.ಜಿ. ತನಕ ತೂಗುತ್ತವೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ೨-೩ ಹಣ್ಣು ಬರುವಂತಿದ್ದರೆ ಅವುಗಳಿಗೆ ಬೇಡಿಕೆ ಹೆಚ್ಚು. ತುಂಬಾ ಚಿಕ್ಕದು ಅಥವಾ ತುಂಬಾ ದೊಡ್ಡ ಗಾತ್ರ ಮತ್ತು ತೂಕದ ಹಣ್ಣುಗಳನ್ನು ಗ್ರಾಹಕರು ಇಷ್ಟಪಡುವುದಿಲ್ಲ. ಹಾಗಾಗಿ ಮಾರುಕಟ್ಟೆಗೆ ಕಳುಹಿಸುವ ಮೊದಲು ಹಣ್ಣುಗಳನ್ನು ವಿಂಗಡಿಸುವ ಸಂದರ್ಭ ಮಧ್ಯಮ ಗಾತ್ರದ ಹಣ್ಣುಗಳಿಗೆ ಆದ್ಯತೆ ಕೊಡಲಾಗುತ್ತದೆ. ಮಳೆಗಾಲದಲ್ಲಾದರೆ ಫಸಲು ತುಂಬಾ ಇರುವುದರಿಂದ ವ್ಯಾಪಾರಿಗಳು ಖರೀದಿ ಮಾಡುವಾಗಲೇ ಇಂಥ ಹಣ್ಣು ಆಯ್ದುಕೊಳ್ಳುತ್ತಾರೆ. ಆದರೆ ಈಗ ಎಲ್ಲಾ ಬಗೆಯ ಹಣ್ಣುಗಳನ್ನು ಒಟ್ಟಿಗೆ ಖರೀದಿಸಿ ನಂತರ ವಿಂಗಡಣೆ ಮಾಡಲಾಗುತ್ತದೆ.

ಅವಾಕಡೋ ಹಣ್ಣಿನ ತಿರುಳು ಥೇಟ್ ಬೆಣ್ಣೆಯಂತೆ ಇರುವುದರಿಂದ ಇದನ್ನು ಬಟರ್‌ಫ್ರೂಟ್ ಎಂದು ಕರೆಯಲಾಗುತ್ತದೆ. ಬರೀ ಹಣ್ಣು ಸೇವಿಸಿದರೆ ಯಾವುದೇ ರುಚಿಯ ಅನುಭವ ಆಗುವುದಿಲ್ಲ. ಆದರೆ ಇದಕ್ಕೆ ಸಕ್ಕರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಸೇರಿಸಿದರೆ ವಿಶೇಷ ಸ್ವಾಧ ಸವಿಯಬಹುದು. ಬಟರ್‌ಫ್ರೂಟ್‌ನಲ್ಲಿ ಆರೋಗ್ಯಕ್ಕೆ ಪೂರಕ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಜನರು ಇಷ್ಟಪಟ್ಟು ಖರೀದಿಸುತ್ತಾರೆ. ಸಕ್ಕರೆ, ಜೇನು, ಅಥವಾ ಬೆಲ್ಲ ಬೆರೆಸಿ ತಿನ್ನುವುದು ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಬಟರ್‌ಫ್ರೂಟ್ ಮಿಲ್ಕ್‌ಶೇಕ್‌ಗೆ ಹೆಚ್ಚಿನ ಬೇಡಿಕೆ ಇದೆ. ಬ್ರೆಡ್ ಜತೆಗೆ ಜಾಮ್ ರೀತಿಯಲ್ಲೂ ಸೇವಿಸುವವರಿದ್ದಾರೆ.
ಸೌಂದರ್ಯವರ್ಧಕ ತಯಾರಿಕಾ ಸಂಸ್ಥೆಗಳಿಗೂ ಬಟರ್‌ಫ್ರೂಟ್ ಪೂರೈಕೆ ಆಗುತ್ತದೆ. ಫೇಸ್‌ಪ್ಯಾಕ್ ಸೇರಿದಂತೆ ಹಲವು ಸೌಂದರ್ಯ ಉತ್ಪನ್ನಗಳನ್ನು ತಯಾರಿಸಲು ಬೆಣ್ಣೆಹಣ್ಣಿನಲ್ಲಿ ಇರುವ ಅಂಶಗಳನ್ನು ಬಳಸಿಕೊಳ್ಳಲಾಗುತ್ತದೆ. ಅವಾಕಡೋ ಬೀಜದಿಂದ ತೆಗೆಯುವ ಎಣ್ಣೆಯೂ ಬಹುಪಯೋಗಿ ಆಗಿದೆ. ಈ ಎಣ್ಣೆಯನ್ನು ನೇರವಾಗಿ ಅಡುಗೆಗೆ ಬಳಸಲು ಸಾಧ್ಯವಾಗುವುದಿಲ್ಲ. ಆದರೆ ಸೌಂದರ್ಯವರ್ಧಕಗಳ ಉದ್ಯಮದಲ್ಲಿ ಬಳಕೆ ಮಾಡಲಾಗುತ್ತಿದೆ. ಚರ್ಮ ಮತ್ತು ಕೂದಲು ರಕ್ಷಣೆಯ ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.

ಬಟರ್‌ಫ್ರೂಟ್‌ಗೆ ಒಳ್ಳೆಯ ಬೇಡಿಕೆ ಇದೆ. ನಾವು ನೇರವಾಗಿ ತೋಟಗಳಿಂದಲೇ ಬಟರ್‌ಫ್ರೂಟ್ ಖರೀದಿ ಮಾಡುತ್ತೇವೆ. ಉತ್ತಮ ಗುಣಮಟ್ಟದ ಹಣ್ಣುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ದೇಶೀಯವಾಗಿಯೂ ಮಹಾನಗರಗಳಿಗೆ ಪೂರೈಕೆ ಮಾಡುತ್ತೇವೆ. ಪ್ರತಿ ದಿನ ೫ ಟನ್‌ಗೂ ಅಧಿಕ ಹಣ್ಣು ನಾವು ಮಾರುಕಟ್ಟೆಗೆ ಕಳುಹಿಸುತ್ತಿದ್ದೇವೆ. ಆದರೂ ಬೇಡಿಕೆ ಸಂಪೂರ್ಣವಾಗಿ ಪೂರೈಸಲು ಸಾಧ್ಯ ಆಗುತ್ತಿಲ್ಲ. ಈ ಹಣ್ಣಿನಲ್ಲಿ ಇರುವ ಆರೋಗ್ಯಕರ ಅಂಶಗಳು ಇದಕ್ಕೆ ಈ ಮಟ್ಟಿಗೆ ಬೇಡಿಕೆ ಸೃಷ್ಟಿಸಿವೆ.
ಅಬ್ದುಲ್ ಲತೀಫ್, ಬೆಣ್ಣೆಹಣ್ಣು ವ್ಯಾಪಾರಿ, ಅರಕಲಗೂಡು

ಉತ್ತಮ ಗುಣಮಟ್ಟದ ಹಣ್ಣುಗಳಿಗೆ ಒಳ್ಳೆಯ ದರ ಕೊಡುತ್ತೇವೆ. ನಮಗೆ ಬೇಕಿರುವಷ್ಟು ಪ್ರಮಾಣದಲ್ಲಿ ಬಟರ್‌ಫ್ರೂಟ್ ಲಭ್ಯ ಆಗುತ್ತಿಲ್ಲ. ಬಟರ್‌ಫ್ರೂಟ್ ಮಾರುಕಟ್ಟೆ ದೊಡ್ಡದಿದೆ. ಹಾಗಾಗಿ ಬೆಳೆಗಾರರಿಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಸದ್ಯದ ಮಟ್ಟಿಗೆ ಗ್ರಾಹಕರ ನೇರ ಬಳಕೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳ ಪೂರೈಕೆ ಮಾಡಲಾಗುತ್ತಿದೆ. ಈ ಹಣ್ಣಿನ ಬೀಜದಿಂದ ದೊಡ್ಡ ಪ್ರಮಾಣದಲ್ಲಿ ಎಣ್ಣೆ ತಯಾರಿಕೆ ಶುರುವಾದರೆ ಆಗ ಉಂಟಾಗುವ ಬೇಡಿಕೆ ತೀರಿಸಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಣ್ಣೆ ಹಣ್ಣು ಬೇಕಾಗುತ್ತದೆ. ಬೆಳೆಗಾರರು ವೈಜ್ಞಾನಿಕವಾಗಿ ಹಣ್ಣು ಬೆಳೆದರೆ ಯಾವಾಗಲೂ ಉತ್ತಮ ಬೆಲೆ ಸಿಗುತ್ತದೆ.
ಅಬ್ದುಲ್ ಹಕ್, ಬೆಣ್ಣೆಹಣ್ಣು ವ್ಯಾಪಾರಿ, ಅರಕಲಗೂಡು

ಹಣ್ಣುಗಳ ಗುಣಮಟ್ಟ ಉತ್ತಮವಾಗಿದ್ದರೆ ಬೆಲೆಯೂ ಚೆನ್ನಾಗಿ ಸಿಗುತ್ತದೆ. ಬೇಸಿಗೆ ಅವಧಿಯಲ್ಲಿ ಬಟರ್‌ಫ್ರೂಟ್ ಫಸಲು ಕಡಿಮೆ ಇರುತ್ತದೆ. ಹಾಗಾಗಿ ಹೆಚ್ಚು ಬೇಡಿಕೆ ಉಂಟಾಗಿದ್ದು, ವ್ಯಾಪಾರಿಗಳು ನಮ್ಮ ತೋಟಕ್ಕೆ ಬಂದು ಅವರೇ ಹಣ್ಣು ಕೊಯ್ಲು ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ವ್ಯಾಪಾರಿಗಳ ಮಧ್ಯೆಯೂ ಪೈಪೋಟಿ ಇರುವುದರಿಂದ ಬೆಳೆಗಾರರಿಗೆ ಲಾಭ ಆಗುತ್ತಿದೆ. ನಾನು ೧೮ ಎಕರೆಯಲ್ಲಿ ಬಟರ್‌ಫ್ರೂಟ್ ಬೆಳೆದಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿ ಇದ್ದೇನೆ.
ಬಿಪಿನ್ ಥೋಮಸ್, ಬಟರ್‌ಫ್ರೂಟ್ ಬೆಳೆಗಾರ, ಸಿದ್ದಲಿಂಗಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net