

ತುಮಕೂರು: ಜಿಲ್ಲೆಯಲ್ಲಿ ಮತ್ತೊಂದು ಕರೊನಾ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೇರಿದೆ
ಮೈಸೂರಿನ ಮೆಟಗಳ್ಳಿಯ 33 ವರ್ಷದ ವ್ಯಕ್ತಿ ಮುಂಬೈ ಹೋಟೆಲ್‌ನಲ್ಲಿ ಪರಿಚಾರಕನಾಗಿದ್ದು (ವೈಟರ್) ಮೇ 24 ರಂದು ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ತುಮಕೂರಿನಲ್ಲಿ ಇಳಿದಿದ್ದಾನೆ. ಭಾನುವಾರದಂದು ಕರ್ಫ್ಯೂ ಜಾರಿಯಲ್ಲಿದ್ದರಿಂದ ನಗರದಲ್ಲಿ ಇಳಿದ ಆತ ನೇರವಾಗಿ ಜಿಲ್ಲಾಸ್ಪತ್ರೆಗೆ ತೆರಳಿದ್ದು ಪ್ರಯಾಣದ ಹಿನ್ನೆಲೆ ಇದ್ದಿದ್ದರಿಂದ ಆತನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆತನಿಗೆ ಸೋಂಕಿರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯನ್ನು ಪಿ-2343 ಗುರುತಿಸಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ರೀತಿಯ ಜ್ವರ, ಉಸಿರಾಟದ ತೊಂದರೆ ಅವರಲ್ಲಿ ಕಂಡುಬಂದಿಲ್ಲವೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ.
28ಕ್ಕೆ ಏರಿಕೆ: ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28ಕ್ಕೇ ಏರಿದೆ. ಐವರು ಗುಣಮುಖರಾಗಿ ಹೋಂಕ್ವಾರಂಟೈನ್‌ನಲ್ಲಿದ್ದಾರೆ. 21 ಮಂದಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 70 ಶಂಕಿತರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿದ್ದ 203 ಮಂದಿಯನ್ನು ವಿವಿಧ ಕಡೆ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಈವರೆಗೆ ಜಿಲ್ಲೆಯಲ್ಲಿ 9060 ಮಂದಿಗೆ ಕರೊನಾ ತಪಾಸಣೆಗೆ ಒಳಪಡಿಸಿದ್ದು, 8406 ಮಂದಿಯ ವರದಿ ನೆಗೆಟಿವ್ ಬಂದಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಬಂದ 2093 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಮುಂಬೈ ಸೇರಿದಂತೆ ನೆರೆಯ ರಾಜ್ಯ, ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುತ್ತಿರುವವರ ಮೇಲೆ ನಿಗಾ ವಹಿಸಿರುವ ಜಿಲ್ಲಾಡಳಿತ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಿದೆ. ಹೊರ ಭಾಗದಿಂದ ಬಂದು ತಮ್ಮ ನೆರೆಹೊರೆಯಲ್ಲಿರುವವರ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆ ಜನರಿಗೆ ಹತ್ತಾರು ಬಾರಿ ಮನವಿ ಮಾಡಲಾಗಿದೆ.