

ವಿಕ್ರಮ ನಾಡಿಗೇರ ಧಾರವಾಡ ಹು-ಧಾ ಅವಳಿನಗರದಲ್ಲಿ ಬಾಕಿ ಉಳಿದಿರುವ ನೀರಿನ ಕರ ವಸೂಲಿಗೆ ಅಧಿಕಾರಿಗಳು ನಾನಾ ಕಸರತ್ತು ನಡೆಸಿದ್ದಾರೆ. ಪ್ರತಿ ತಿಂಗಳ ಬಿಲ್ ಜತೆಗೆ ಬಾಕಿ ವಸೂಲಿ ಸವಾಲಿನ ಕೆಲಸವಾಗಿದೆ. ಇದೇ ಕಾರಣಕ್ಕೆ ಡಿಜಿಟಲ್ ಜತೆಗೆ ಇನ್ನೂ ಅನೇಕ ಕಾರ್ಯಗಳಿಗೆ ಮುಂದಾಗಿದ್ದಾರೆ. ಇದರಿಂದ ಬಾಕಿ ಬೆಳೆಯದಂತೆ ಕೊಂಚ ತಡೆ ನೀಡಿದಂತಾಗಿದೆ. ಮೊದಲಿನ ದಿನಗಳಲ್ಲಿ ಜಲ ಮಂಡಳಿ ಅಥವಾ ಹು-ಧಾ ಒನ್ ಕೇಂದ್ರಕ್ಕೆ ತೆರಳಿಯೇ ನೀರಿನ ಬಿಲ್ ಪಾವತಿಸಬೇಕಿತ್ತು. ಇದರಿಂದ ವೃದ್ಧರು, ಮಹಿಳೆಯರು ಅಲ್ಲಿಗೆ ಹೋಗಿ ಪಾವತಿಸಲು ಹಿಂದೇಟು ಹಾಕುತ್ತಿದ್ದರೆ, ಕೆಲವರು ಕೆಲಸದ ಒತ್ತಡದಲ್ಲಿ ಮುಂದಿನ ತಿಂಗಳು ಎಲ್ಲ ಸೇರಿ ತುಂಬಿದರಾಯಿತು ಎಂದು ಬಿಡುತ್ತಿದ್ದರು. ಹೀಗಾಗಿ ತಿಂಗಳಿಂದ ತಿಂಗಳಿಗೆ ಬಾಕಿ ಬೆಳೆಯುತ್ತಲೇ ಇತ್ತು. ಆದರೆ ಕೆಲ ವರ್ಷಗಳಿಂದ ನೀರಿನ ಕರ ತುಂಬುವ ವ್ಯವಸ್ಥೆಯನ್ನು ಡಿಜಿಟಲೀಕರಣ (ಆನ್ಲೈನ್)ಗೊಳಿಸಿದ್ದರಿಂದ ಬಹುತೇಕರಿಗೆ ಅನುಕೂಲವಾಗಿದ್ದು, ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳ ಬಿಲ್ ಪಾವತಿ ಗಮನಿಸಿದರೆ ಶೇ. 40ರಷ್ಟು ಜನರು ಆನ್ಲೈನ್ ಮೂಲಕ ಪಾವತಿ ಮಾಡಿದ್ದಾರೆ. ಈ ಅವಧಿಯಲ್ಲಿ 25.51 ಕೋಟಿ ರೂ. ಬಿಲ್ ಸೃಜಿಸಲಾಗಿದ್ದು, ಒಟ್ಟಾರೆ 23.64 ಕೋಟಿ ರೂ. ಪಾವತಿಯಾಗಿದೆ. ನೀರಿನ ಕರ ಸಂಗ್ರಹಣೆ ಸುಧಾರಣೆಗಾಗಿ ಸಾಕಷ್ಟು ಕ್ರಮ ವಹಿಸಲಾಗಿದೆ. ಮಹಾನಗರ ಪಾಲಿಕೆ, ಕೆಯುಐಡಿಎಫ್ಸಿ ಯೋಜನಾ ಅನುಷ್ಠಾನ ಘಟಕ, ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದಕ್ಕಾಗಿ ಮೀಟರ್ ರೀಡರ್, ಕರ ಸಂಗ್ರಹಣಾಗಾರರೊಂದಿಗೆ ನಿರಂತರ ಸಭೆಗಳನ್ನು ಮಾಡಿ ಅವರಿಗೆ ನೀರಿನ ಕರ ಸಂಗ್ರಹಣೆಗೆ ಗ್ರಾಹಕರ ಮನವೊಲಿಸುವ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಮನೆ ಮನೆಗಳಿಗೆ ಭೇಟಿ ನೀಡಿ ಗ್ರಾಹಕರಿಗೆ ಮಾಹಿತಿ ನೀಡಿ ಮನವೊಲಿಸಿ ಕರ ಸಂಗ್ರಹಣೆ ಪ್ರಯತ್ನ ಮಾಡುತ್ತಿದ್ದಾರೆ. * 2024-25ನೇ ಆರ್ಥಿಕ ವರ್ಷದಲ್ಲಿ ನೀರಿನ ಕರ ಸಂಗ್ರಹಣೆ: ಏಪ್ರಿಲ್ನಲ್ಲಿ ಮಾಸಿಕ ನೀರಿನ ಕರ 4.6 ಕೋಟಿ ರೂ. ಸೃಜಿಸಿದ್ದರೆ, 3.66 ಕೋಟಿ ರೂ. ಪಾವತಿಯಾಗಿದೆ. ಶೇ. 84ರಷ್ಟು ಪಾವತಿಯಾದ ಮೊತ್ತದಲ್ಲಿ ಶೇ. 31 ಡಿಜಿಟಲ್ ಮೂಲಕ ಪಾವತಿಯಾಗಿದೆ. ಮೇ ತಿಂಗಳಲ್ಲಿ 4.51 ಕೋಟಿ ರೂ. ಸೃಜಿಸಿದ್ದರೆ, 4.10 ಕೋಟಿ ರೂ. ಪಾವತಿಯಾಗಿದೆ. ಶೇ. 91ರಲ್ಲಿ ಶೇ. 30ರಷ್ಟು ಡಿಜಿಟಲ್ ಪಾವತಿಯಾಗಿದೆ. ಜೂನ್ನಲ್ಲಿ 4.14 ಕೋಟಿ ರೂ. ಸೃಜಿಸಿದ್ದರೆ, 4.42 ಕೋಟಿ ರೂ. ಪಾವತಿಯಾಗಿದೆ. ಶೇ. 107ರಲ್ಲಿ ಶೇ. 32ರಷ್ಟು ಡಿಜಿಟಲ್ ಪಾವತಿಯಾಗಿದೆ. ಜುಲೈನಲ್ಲಿ 3.97 ಕೋಟಿ ರೂ. ಸೃಜಿಸಿದ್ದರೆ, 4.05 ಕೋಟಿ ರೂ. ಪಾವತಿಯಾಗಿದೆ. ಶೇ. 102ರಲ್ಲಿ ಶೇ. 38ರಷ್ಟು ಡಿಜಿಟಲ್ ಪಾವತಿಯಾಗಿದೆ. ಆಗಸ್ಟನಲ್ಲಿ 4.67 ಕೋಟಿ ರೂ. ಸೃಜಿಸಿದ್ದರೆ, 4.02 ಕೋಟಿ ರೂ. ಪಾವತಿಯಾಗಿದೆ. ಶೇ. 86ರಲ್ಲಿ ಶೇ. 40ರಷ್ಟು ಡಿಜಿಟಲ್ ಪಾವತಿಯಾಗಿದೆ. ಸೆಪ್ಟೆಂಬರ್ನಲ್ಲಿ 3.86 ಕೋಟಿ ರೂ. ಸೃಜಿಸಿದ್ದರೆ, 3.39 ಕೋಟಿ ರೂ. ಪಾವತಿಯಾಗಿದೆ. ಶೇ. 88ರಲ್ಲಿ ಶೇ. 40ರಷ್ಟು ಡಿಜಿಟಲ್ ಪಾವತಿಯಾಗಿದೆ. ಹೀಗೆ ಒಟ್ಟು 6 ತಿಂಗಳಲ್ಲಿ ಸೃಜಿಸಿದ 25.51 ಕೋಟಿ ರೂ. ಮೊತ್ತದಲ್ಲಿ 23.64 ಕೋಟಿ ರೂ. ಪಾವತಿಯಾಗಿದೆ. ಶೇ. 93ರಲ್ಲಿ ಶೇ. 35.16ರಷ್ಟು ಡಿಜಿಟಲ್ ಮೂಲಕ ಪಾವತಿಯಾಗಿದೆ.
* ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತಡಿಜಿಟಲ್ ಮೂಲಕ ಬಿಲ್ ಪಾವತಿ ಮಾಡುವ ಪ್ರಕ್ರಿಯೆ ಜಾರಿಗೆ ಬಂದ ನಂತರದಲ್ಲಿ ಬಾಕಿ ಉಳಿಯುವುದು ಸಾಕಷ್ಟು ಕಡಿಮೆಯಾಗಿದೆ. ಪ್ರತಿ ತಿಂಗಳು ಅನೇಕ ಜನರು ಆನ್ಲೈನ್ ಮೂಲಕ ಪಾವತಿ ಮಾಡುತ್ತಿದ್ದಾರೆ. ಇದಲ್ಲದೆ ಸರಿಯಾದ ಸಮಯಕ್ಕೆ ಕರ ಪಾವತಿಗೆ ಅಧಿಕಾರಿಗಳು ಸಹ ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ಬಾಕಿ ಉಳಿಯುವುದು ಕಡಿಮೆಯಾದಂತಾಗಿದೆ.