ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಹೆಚ್ಚಳ

14 mlv 1 (1)
ಮಳವಳ್ಳಿ ಪಟ್ಟಣದ ಸರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ ದಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಜಾಥಾಗೆ ವೈದ್ಯಾಧಿಕಾರಿ ಡಾ.ಸಂಜಯ್ ಚಾಲನೆ ನೀಡಿದರು. ಡಾ. ಶಿವಸ್ವಾಮಿ, ಡಾ. ಅನುಪಮಾ, ಚಂದ್ರಮೋಹನ್, ಚಿಕ್ಕಣ್ಣ, ಎಂ.ಎನ್.ಮಹೇಶ್ ಕುಮಾರ್ ಇತರರಿದ್ದರು.
Published on

ಮಳವಳ್ಳಿ: ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಜಾಥಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬುಧವಾರ ಪಟ್ಟಣದಲ್ಲಿ ನಡೆಸಲಾಯಿತು.

ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆ ಆವರಣದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಪ್ರತಿ ಮನೆಯಲ್ಲೂ ಅರೋಗ್ಯ ಸಮಸ್ಯೆ ಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಕ್ಯಾನ್ಸರ್ ನಂತಹ ಮಹಾಮಾರಿ ಕಾಯಿಲೆ ವ್ಯಾಪಕವಾಗಿ ಹರಡಲು ಪ್ಲಾಸ್ಟಿಕ್ ಬಳಕೆ ಮುಖ್ಯ ಕಾರಣವಾಗಿದೆ ಎಂದರು.

ಅರೋಗ್ಯದ ಜತೆಗೆ ಪರಿಸರಕ್ಕೂ ಮಾರಕವಾಗುತ್ತಿರುವ ಪ್ಲಾಸ್ಟಿಕ್ ಬಗ್ಗೆ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳುವ ಮೂಲಕ ಬಳಕೆ ನಿಲ್ಲಿಸಬೇಕೆಂದು ಮನವಿ ಮಾಡಿದರು.

ಸೌಹಾರ್ದ ನಾಗರಿಕ ವೇದಿಕೆ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ಪರಿಸರ ಹಾಗೂ ಜನರ ಆರೋಗ್ಯಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮುಕ್ತ ತಾಲೂಕನ್ನಾಗಿ ಘೋಷಣೆ ಮಾಡಲು ಜೂ. 5ರಂದು ಬೃಹತ್ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಆಯೋಜಿಸಲಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕರು ಈ ಪ್ಲಾಸ್ಟಿಕ್ ವಿರುದ್ಧದ ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.

ನಂತರ ಹಲವು ಶುಶ್ರೂಷಕರು ಹಾಗೂ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಜಾಥಾದಲ್ಲಿ ಪಾಲ್ಗೊಂಡರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಆರೋಗ್ಯ ರಕ್ಷಣೆ ಕುರಿತ ಕಿರು ನಾಟಕ ಪ್ರದರ್ಶನದ ಜತೆಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ವೈದ್ಯರಾದ ಡಾ.ಶಿವಸ್ವಾಮಿ, ಡಾ.ಅನುಪಮಾ, ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್, ಸೌಹಾರ್ದ ನಾಗರಿಕ ವೇದಿಕೆಯ ಚಿಕ್ಕಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net