

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಸಂಕಟ ಮುಂದುವರಿದಿದ್ದು, ಆಕಾಂಗಳ ಜತೆಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಲ್ಲೂ ತಳಮಳ ಹೆಚ್ಚಿಸಿದೆ. ಸರ್ಕಾರ, ಸಂಟನೆಯಲ್ಲಿನ ನಿಗೂಢತೆ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಇದರಿಂದ ಜನರಿಗೆ ಬೇರೆ ಸಂದೇಶ ರವಾನೆಯಾಗಲಿದ್ದು, ವ್ಯತಿರಿಕ್ತ ಪರಿಣಾಮಬೀರಲಿದೆ ಎನ್ನುವುದೇ ಕಳವಳಕ್ಕೆ ಕಾರಣ.
ಪಂಚ ರಾಜ್ಯಗಳ ಚುನಾವಣೆ, ವಿಧಾನಮಂಡಲ ಬಜೆಟ್ ಅಧಿವೇಶನ ಮುಗಿಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿ ಬಂದಾಯಿತು. ಪಕ್ಷದ ರಾಷ್ಟ್ರೀಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಪ್ರವಾಸವೂ ಮುಗಿದಿದೆ. ಆದರೂ ಏನು ನಡೆಯುತ್ತಿದೆ ಎಂದು ತಿಳಿಯದೆ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ಬಹುಚರ್ಚಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ನಿಗಮ&ಮಂಡಳಿಗಳ ನೇಮಕದ ಬಗ್ಗೆ ಷಾ ಸ್ಪಷ್ಟ ಸೂಚನೆ ನೀಡಲಿದ್ದಾರೆ ಎಂಬ ನಿರೀೆ ಹುಸಿಯಾಗಿದೆ.
ಮತ್ತೆ ದೆಹಲಿಯತ್ತ ಚಿತ್ತ: ಚುನಾವಣಾ ಮಂತ್ರಿ ಮಂಡಲ ರಚನೆ ಕುರಿತು ವರಿಷ್ಠರಮಟ್ಟದಲ್ಲಿ ನಿರ್ಧಾರವಾಗಿದೆ. ಜಾರಿಗೆ ಮುನ್ನ ಷಾ ರಾಜ್ಯಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ. ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಹಾಲಿ, ಭಾವಿ ಸಚಿವರು, ರಾಜ್ಯ ನಾಯಕರ ಚಿತ್ತವೆಲ್ಲ ಮತ್ತೆ ದೆಹಲಿಯತ್ತ ನೆಟ್ಟಿದೆ ಎಂದು ಮೂಲಗಳು ತಿಳಿಸಿವೆ. ಬದಲಾವಣೆ, ಪುನಾರಚನೆ ಸಾಧ್ಯತೆಗಳು ಬಹಳಷ್ಟು ಸಚಿವರನ್ನು ಅರೆಮನಸ್ಕರನ್ನಾಗಿ ಮಾಡಿದ್ದು, ಇಲಾಖೆ ಕೆಲಸಗಳಿಗೆ ನ್ಯಾಯ ಸಿಗುತ್ತಿಲ್ಲವೆಂಬ ಅಪಸ್ವರ ಕೇಳಿಬರುತ್ತಿದೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಹಾಗೂ ಗಿಟ್ಟಿಸಿಕೊಳ್ಳಲು ತೆರೆಮರೆಯ ಲಾಬಿ ನಡೆಸಿದ್ದರೆ, ಕೆಲ ಹಿರಿಯ ನಾಯಕರ ಹೇಳಿಕೆಗಳಿಂದ ಕಾರ್ಯಕರ್ತರಿಗೆ ಅಯೋಮಯವಾಗಿದೆ. ಕೇಂದ್ರ&ರಾಜ್ಯ ಸರ್ಕಾರದ ಯೋಜನೆಗಳ ಪ್ರಚಾರದ ಮೂಲಕ ಜನರ ವಿಶ್ವಾಸ ಗಳಿಸುವ ಚಟುವಟಿಕೆ ನಡೆದಿದ್ದರೆ, ನಾಯಕರ ವಿಭಿನ್ನ ಹಾದಿ ಹಿಡಿದಿದ್ದಾರೆ ಎಂಬ ಅಸಹನೆ ಮುಖಂಡರಲ್ಲಿ ಮಡುಗಟ್ಟಿದೆ.
ಶ್ರೀಘ್ರ ನಿರ್ಧಾರ: ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ವಿಚಾರದಲ್ಲಿ ವರಿಷ್ಠರ ದೃಢ ನಿಲುವು ತಳೆದಿದ್ದು, ನಿರ್ಧಾರದ ಬಗ್ಗೆ ಶ್ರೀವೇ ಮಾಹಿತಿ ನೀಡಿ ಅನಿಶ್ಚತತೆ ನಿವಾರಿಸುವ ಸಾಧ್ಯತೆಗಳಿವೆ. ಮುಂದಿನ ಚುನಾವಣೆಗೆ ಅಭಿವೃದ್ಧಿಯೇ ಪ್ರಧಾನ ಕಾರ್ಯಸೂಚಿಯಾಗಿದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ಯೋಜನೆಗಳ ತ್ವರಿತ ಅನುಷ್ಠಾನವೇ ಆಧಾರವಾಗಿದೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ವರಿಷ್ಠರಲ್ಲಿ ಸಮಗ್ರ ಮಾಹಿತಿಯಿದೆ. ಬದಲಾವಣೆ ನಿರ್ಧಾರ ವಿಳಂಬವಾದಷ್ಟು ಸಮಸ್ಯೆಯಾಗಲಿದೆ ಎನ್ನುವುದು ಅವರಿಗೆ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ಯೂರೋಪ್ ಪ್ರವಾಸದಿಂದ ವಾಪಸಾದ ಬಳಿಕ ಗುಜರಾತ್ ಮತ್ತು ಕರ್ನಾಟಕದ ರಾಜಕೀಯ ತೀರ್ಮಾನಗಳ ಬಗ್ಗೆ ಚರ್ಚೆಯಾಗಲಿವೆ. ಜಾತಿ&ವರ್ಗ, ಪ್ರದೇಶ ಮತ್ತು ಜಿಲ್ಲೆ ಮಧ್ಯೆ ಸಮತೋಲನದ ಜತೆಗೆ ಚುನಾವಣಾ ಕಾರ್ಯ ತಂತ್ರದ ಭಾಗವಾಗಿ ಸಚಿವ ಸಂಪುಟ ಸರ್ಜರಿಗೆ ವೇದಿಕೆ ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಭೆ ರದ್ದು ಸಮಜಾಯಿಷಿ: ಸರ್ಕಾರ ಹಾಗೂ ಸಂಟನೆ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ರಾಜ್ಯದ ಜನರಿಗೆ ಬೇರೆ ಮಾಹಿತಿ ರವಾನಿಸುವುದನ್ನು ತಪ್ಪಿಸಲೆಂದು ಅಮಿತ್ ಷಾ ನೇತೃತ್ವದ ವಿಶೇಷ ಸಭೆ ರದ್ದಾಯಿತು ಎಂದು ಪಕ್ಷದ ಉನ್ನತ ಮೂಲಗಳು ಸಮಜಾಯಿಷಿ ನೀಡಿವೆ. ಕೋರ್ ಕಮಿಟಿ, ಪದಾಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಚರ್ಚಿಸಲು ಷಾ ಬಯಸಿದ್ದರು. ಈ ಕಾರಣಕ್ಕಾಗಿ ಅವರ ಪ್ರವಾಸದ ವೇಳಾಪಟ್ಟಿಯಲ್ಲಿ ಸಭೆಯೂ ಸೇರಿತ್ತು. ರಾಜ್ಯಕ್ಕೆ ಬಂದ ನಂತರ ಪರಿಸ್ಥಿತಿ ಅವಲೋಕಿಸಿದ್ದಾರೆ. ಸಭೆಯಲ್ಲಿ ನಡೆಯುವ ಚರ್ಚೆ ಬೇರೆ ರೀತಿ ವ್ಯಾಖ್ಯಾನಕ್ಕೆ ಕಾರಣವಾಗಲಿದೆ ಎಂದು ಅಂದಾಜಿಸಿ ಸಭೆಯನ್ನು ಷಾ ರದ್ದುಪಡಿಸಿದ್ದಾರೆ ಎಂದು ಮೂಲಗಳು ತರ್ಕಿಸಿವೆ.
ಅಮಿತ್ ಷಾ ಅವರು ದೆಹಲಿಗೆ ಹೋದ ನಂತರ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಮಾಹಿತಿ ನೀಡುವುದಾಗಿ ಹೇಳಿದ್ದಾರೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಸಂಪುಟ ಸಭೆ ಮುಂದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ದಿಢೀರ್ ಮುಂದಕ್ಕೆ ಹೋಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಗುರುವಾರ ಸಚಿವ ಸಂಪುಟ ಸಭೆ ನಡೆಯಬೇಕಾಗಿತ್ತು, ಆದರೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಬೆಂಗಳೂರು ಭೇಟಿಯ ಬೆನ್ನ ಹಿಂದೆಯೇ ಮೇ 11ಕ್ಕೆ ಮುಂದೂಡಿ ಬುಧವಾರ ಆದೇಶ ಹೊರಬಿದ್ದಿದೆ. ಮುಂದಿನ ಕೆಲವೇ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿರುವುದರಿಂದ ಸಚಿವ ಸಂಪುಟ ಸಭೆ ಮುಂದೂಡಲ್ಪಟ್ಟಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಬಿಜೆಪಿ ಮೂಲಗಳು ಅದೇ ಅನುಮಾನ ವ್ಯಕ್ತಪಡಿಸುತ್ತವೆ. ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಪಸ್ ಬಂದ ನಂತರ ಕೆಲವೊಂದು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.