

ರಾಯಚೂರು: ಪಠ್ಯದ ಹೊರತಾಗಿಯೂ ಇನ್ನಿತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲು ಬೇಸಿಗೆ ಶಿಬಿರಗಳು ಉಪಯೋಗಕಾರಿಯಾಗಿದ್ದು, ಶಿಬಿರಗಳಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಉಪನ್ಯಾಸಕಿ ಡಾ.ಅರುಣಾ ಹಿರೇಮಠ ಹೇಳಿದರು.
ಸ್ಥಳೀಯ ಡಿಎಚ್‌ಒ ಕಚೇರಿ ಆವರಣದಲ್ಲಿ ಪಂ.ತಾರಾನಾಥ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಶಿಬಿರದ ಮೂಲಕ ಮಕ್ಕಳಲ್ಲಿ ವೌಲ್ಯ ಮತ್ತು ನೈತಿಕತೆ ಬೆಳೆಸಬೇಕು ಎಂದರು.
ಮೊಬೈಲ್ ಮತ್ತು ಟಿವಿ ಗೀಳಿನಿಂದಾಗಿ ಮಕ್ಕಳಲ್ಲಿ ವೌಲ್ಯಗಳ ಕುಸಿತ ಉಂಟಾಗುತ್ತಿದೆ. ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಬೆಳೆಸುವುದರ ಜತೆಗೆ ಅವರು ಮಾನಸಿಕವಾಗಿ ಸದೃಢವಾಗುವಂತೆ ಮಾಡಲು ಶಿಬಿರಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನು ಗುರುತಿಸಿ ಅದನ್ನು ಹೊರಗೆ ತರಲು ಹಾಗೂ ಅವರಲ್ಲಿ ನೈತಿಕ ವೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ ಹೋರಾಟಗಾರರ, ಸಮಾಜ ಸುಧಾರಕರ ಜೀವನ ಆದರ್ಶಗಳಲ್ಲಿ ಶಿಬಿರದಲ್ಲಿ ಮಕ್ಕಳಿಗೆ ತಿಳಿಸಲಾಗುತ್ತಿದೆ ಎಂದರು.
ಪಂ.ತಾರಾನಾಥ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಸರೋಜಾ ಗೋನ್ವಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಆಂಜಿನೇಯ ಜಾಲಿಬೆಂಚಿ, ವೇದಿಕೆ ಸದಸ್ಯ ಮಲ್ಲನಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.