

ತುಮಕೂರು : ಸ್ಮಾರ್ಟ್ ಸಿಟಿ ಯೋಜನೆಗಳು ಸಮಪರ್ಕ ಮತ್ತು ತ್ವರಿತವಾಗಿ ಪೂರ್ಣಗೊಳ್ಳಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ನಡುವೆ ಸಮನ್ವಯ ಸಾಧಿಸಿ, ಯೋಜನೆಯ ವೇಗ ಹೆಚ್ಚಿಸುವ ಅಗತ್ಯವಿದೆ ಎಂದು ಬೆಂಗಳೂರಿನ ವಿದ್ಯುಚ್ಛಕ್ತಿ ಉತ್ಪಾದನಾ ಸಂಶೋಧನಾ ಮತ್ತು ಅಭಿವೃದ್ಧಿ ಸಮನ್ವಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ನಾಗರಾಜ್ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಆಯೋಜಿಸಿದ್ದ ಎಐಸಿಟಿಇ ಪ್ರಾಯೋಜಿತ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಇತ್ತೀಚಿನ ಅಭಿವೃದ್ಧಿ ಕುರಿತ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಯಶಸ್ವಿಗೆ ಸಮನ್ವಯತೆ ಮುಖ್ಯ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅನೇಕ ತಂತ್ರಜ್ಞಾನಗಳ ಅನುಷ್ಠಾನದ ಅಗತ್ಯವಿದೆ. ಹಾಗಾಗಿ ತುಮಕೂರು ನಗರದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನುರಿತ ತಂತ್ರಜ್ಞರು ಹಾಗೂ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು.
ಜನಜೀವನದ ಸುಧಾರಣೆಗೆ ಬೇಕಾದ ಕಾರ್ಯಯೋಜನೆಗಳನ್ನು ಶೀಘ್ರ ಜಾರಿಗೊಳಿಸಿದಾಗ ಸ್ಮಾರ್ಟ್ ಸಿಟಿ ಪರಿಕಲ್ಪನೆಗೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಸಾರ್ವಜನಿಕ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಾಹೇ ವಿವಿ ಕುಲಸಚಿವ ಡಾ.ಎಂ.ಝೆಡ್.ಕುರಿಯನ್, ಶ್ರೀಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರವಿಪ್ರಕಾಶ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸಂಜೀವ್ ಕುಮಾರ್, ಸಂಯೋಜಕರಾದ ಡಾ. ಶೇಷಾದ್ರಿ. ಡಾ.ರಾಜೇಶ್ ಕಾಮತ್, ಪ್ರದೀಪ್ ಮತ್ತಿರರು ಉಪಸ್ಥಿತರಿದ್ದರು.
ಸ್ಮಾರ್ಟ್ ಸಿಟಿ ಯೋಜನೆ ಹಣವೊಂದೆ ಪ್ರಧಾನವಾಗಿರಬಾರದು. ಸದ್ಯಕ್ಕೆ ದೊರತಿರುವ ಅನುದಾನ ಬಳಸಿಕೊಂಡು, ಋಣಾತ್ಮಕ ಚಿಂತನೆಗಳು-ಆಲೋಚನೆಗಳು ಸ್ಮಾರ್ಟ್ ಆದಾಗ ಯಶಸ್ಸು ಸಾಧಿಸಲು ಸಾಧ್ಯ. ಕರೊನಾದಿಂದ ತೊಂದರೆಯಾಯಿತು ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಂಡು ಯೋಜೆನಗಳ ಜಾರಿಗೊಳಿಸಬೇಕು. ಡಾ.ಬಾಲಕೃಷ್ಣ ಪಿ.ಶೆಟ್ಟಿ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ