

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ಸೋಂಕು ತೀವ್ರತೆ ಪಡೆಯುತ್ತಿದ್ದು, ಸೋಂಕಿತರ ಸಂಖ್ಯೆ ಶತಕ ದಾಟಿದೆ. ಸೋಂಕು ತೀವ್ರತೆ ಪಡೆಯುತ್ತಿದ್ದಂತೆ ಸೀಲ್‌ಡೌನ್ ಪ್ರದೇಶಗಳೂ ಹೆಚ್ಚುತ್ತಿವೆ. ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆಯೂ ಸೀಲ್‌ಡೌನ್ ಆಗಿದೆ.
ನಗರ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದ ಕರೊನಾ ಸೋಂಕು ಗ್ರಾಮಗಳಲ್ಲೂ ಹರಡುತ್ತಿದೆ. ಕರೊನಾ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಜಿಲ್ಲಾಡಳಿತ ಸೀಲ್‌ಡೌನ್ ಪ್ರದೇಶಗಳತ್ತ ಹದ್ದಿನಕಣ್ಣಿಟ್ಟಿದೆ. ವಿದೇಶದಿಂದ ಆಗಮಿಸುತ್ತಿದ್ದ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಕಳುಹಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದ ಜಿಲ್ಲಾಡಳಿತ ಈಗ ಸೀಲ್‌ಡೌನ್ ಪ್ರದೇಶಗಳತ್ತ ದೌಡಾಯಿಸುತ್ತಿದೆ.
ವಿಶ್ವನಾಥಪುರ ಠಾಣೆ ಸೀಲ್‌ಡೌನ್
ಕುಂದಾಣ: ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಪೊಲೀಸ್ ಠಾಣೆಯೊಂದು ಸೀಲ್‌ಡೌನ್ ಆಗಿದೆ. ಸರಗಳವು ಪ್ರರಕಣದಲ್ಲಿ ಬಂಧಿತ ಆರೋಪಿಯಲ್ಲಿ ಕರೊನಾ ಪತ್ತೆಯಾಗಿದ್ದರಿಂದ ಕುಂದಾಣ ಹೋಬಳಿ ವಿಶ್ವನಾಥಪುರ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಜೂ.27 ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಠಾಣೆಯ 10 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ, ಇವರಲ್ಲಿ ಇಬ್ಬರು ಪೋಲೀಸರಿಗೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ವತ್ರೆಗೆ ದಾಖಲಿಸಲಾಗಿದೆ.
ವಿಶ್ವನಾಥಪುರ ಠಾಣೆ ಪಕ್ಕದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನವಿದ್ದು, ಇಲ್ಲಿ ಹೆಚ್ಚಿನ ಸಾರ್ವಜನಿಕರು ನಿತ್ಯ ಓಡಾಡುತ್ತಾರೆ. ಈಗ ಪೊಲೀಸ್ ಠಾಣೆಯೇ ಸೀಲ್‌ಡೌನ್ ಆಗಿದ್ದರಿಂದ ಎಲ್ಲರಲ್ಲೂ ಆತಂಕ ಮನೆ ಮಾಡಿದೆ.
ಆಸ್ಪತ್ರೆಯಿಂದ ಬಿಡುಗಡೆ
ವಿಜಯಪುರ: ಜೂ.19 ರಂದು ಪಟ್ಟಣದ 2ನೇ ಕರೊನಾ ಸೋಂಕಿತ ವ್ಯಕ್ತಿಯಾಗಿ ಗುರುತಿಸಿಕೊಂಡು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ 47 ವರ್ಷದ ವ್ಯಕ್ತಿ ಗುಣಮುಖರಾಗಿ ಜೂ.28 ರಂದು ಬಿಡುಗಡೆಯಾಗಿ, ಪಟ್ಟಣಕ್ಕೆ ವಾಪಸ್ ಬಂದಿದ್ದಾರೆ. ಆದರೆ ಕ್ವಾರಂಟೈನ್‌ನಲ್ಲಿದ್ದ ಆತನ ಪತ್ನಿಗೆ ಸೋಂಕು ತಗಲಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.