

ದೊಡ್ಡಬಳ್ಳಾಪುರ: ಹಾಲಿನ ದರ ಏರಿಕೆ ಮಾಡಿ ರೈತರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ಬಮುಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಅಸಮಾಧಾನ ಹೊರಹಾಕಿದರು.
ನಗರದ ಶಿಬಿರ ಕಚೇರಿಯಲ್ಲಿ ಭಾನುವಾರ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ, ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಎಂಪಿಸಿಎಸ್ ಡೇರಿಗಳ ಸದಸ್ಯರ ಮಕ್ಕಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪೋಷಕರು ಮತ್ತು ಶಿಕ್ಷಕರ ಮಾತುಗಳನ್ನ ಚಾಚುತಪ್ಪದೆ ಪಾಲಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಫೋನ್, ಇಂಟರ್‌ನೆಟ್‌ಗಳನ್ನ ಉತ್ತಮ ಕೆಲಸಗಳಿಗೆ ಬಳಸಿ. ವಸ್ಕರಾಗಿದ್ದಾಗ ದಾರಿ ತಪ್ಪಿದರೆ ಇಡೀ ಜೀವನವೇ ಮುಗ್ಗಲಮುಳ್ಳಾಗಲಿದೆ, ವಿದ್ಯಾರ್ಥಿ ಜೀವನವನ್ನ ಶಿಕ್ಷಣಕ್ಕಾಗಿ ಮೀಸಲಿಡಿ ಎಂದರು.
ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ತಾಲೂಕಿನ ರೈತರಿಗಾಗಿ ಬಮುಲ್ 50ಕ್ಕೂ ಹೆಚ್ಚು ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಡೇರಿಗಳಲ್ಲಿ 51 ಲಕ್ಷ ರೂಗಳಲ್ಲಿ ಪೀಠೋಪಕರಣ, 150 ಮಾದರಿ ಕೊಠಡಿ, 1 ಕೊಟಿ 86 ಲಕ್ಷ ಅನುದಾನ, 60 ವರ್ಷ ಮೇಲ್ಪಟ್ಟ ರೈತರಿಗೆ 25 ಲಕ್ಷ 60 ಸಾವಿರ ಸಹಾಧನವನ್ನ ನೀಡಿದೆ. ಹೆತ್ತ ತಾಯಿ ಮಗುವನ್ನ ಸಾಕಿ ಸಲಹುವಂತೆ ಬಮುಲ್ ರೈತರನ್ನ ನೋಡಿಕೊಳ್ಳುತ್ತಿದೆ. ರೈತರ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನ ಪ್ರತಿವರ್ಷ ನೀಡಲಾಗುತ್ತಿದೆ. ರೈತರಿಗೆ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ಹಾಲಿನ ದರ ಏರಿಕೆಗೆ ಸಿಎಂ, ಡಿಸಿಎಂ, ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಈವರೆಗೆ ಕ್ರಮವಹಿಸಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಹಾಲಿನ ದರ ಏರಿಕೆಗೆ ಬಿಜೆಪಿಯವರು ಸಹಕಾರ ಕೊಡಬೇಕು. ಈ ತಾಲ್ಲೂಕಿನಲ್ಲಿ ಕೆಎಂಎಫ್ ವತಿಯಿಂದ ಟೆಟ್ರಾ ಪ್ಯಾಕೇಟ್ ಘಟಕ ಸ್ಥಾಪನೆಗೆ ಒಂದೂವರೆ ಕೋಟಿ ವೆಚ್ಚದಲ್ಲಿ ಜಮೀನು ಖರೀದಿ ಮಾಡಲಾಗಿದೆ. ಒಕ್ಕೂಟ ಬೆಳೆದರೆ ರೈತರು ಬೆಳೆದಂತೆ ಎಂದರು.
ನಿಗದಿತ ಸಮಯಕ್ಕೆ ಚುನಾವಣೆಗಳು ನಡೆಯಲಿ
ಹೈನುಗಾರಿಕೆ ಬಯಲು ಸೀಮೆಯ ಜನತೆಗೆ ಜೀವಾಳವಾಗಿದೆ. ನಂದಿನಿ ದೇಶಾದ್ಯಂತ ಬೆಳವಣಿಗೆ ಹೊಂದಿದೆ. ಕೆಎಂಎಫ್‌ಗೆ ಬೆಲೆಗಳ ನಿರ್ಧಾರ ಮಾಡುವ ಅಧಿಕಾರ ನೀಡಬೇಕು. ರೈತರ ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ. ಶಿಕ್ಷಣದ ಜತೆಗೆ ಕೌಶಲವನ್ನ ವಿದ್ಯಾರ್ಥಿಗಳು ಪಡೆಯಬೇಕಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ಬಮೂಲ್ ಸಂಸ್ಥೆಯ ಆಡಳಿತಾವಧಿ ಮುಗಿದು ಒಂದು ವಷರ್ ಕಳೆದರೂ ಈವರೆಗೆ ಕಾಂಗ್ರೆಸ್ ಸರ್ಕಾರ ಚುನಾವಣೆ ಮಾಡಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಕೇವಲ ಹುಸಿ ಮಾತುಗಳನ್ನಾಡುವ ಸರ್ಕಾರ ಸಾರ್ವಜನಿಕ ಸಂಸ್ಥೆಗಳಿಗೆ ಚುನಾವಣೆ ನಡೆಸಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಶೀಘ್ರವಾಗಿ ಸಹಕಾರಿ ಸಂಘಗಳು ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನ ಮಾಡಲಿ ಎಂದು ಆಗ್ರಹಿಸಿದರು.
ಸರ್ಕಾರ ಹಾಲಿನ ದರ ಏರಿಕೆ ಮಾಡಿದಾಗ ಆ ಹಣವನ್ನು ಸಂಪೂರ್ಣವಾಗಿ ರೈತರಿಗೆ ನೀಡಿದರೆ ಯಾರೂ ವಿರೋಧ ಮಾಡುವುದಿಲ್ಲ. ಕೆಎಂಎಫ್ ತಾಲ್ಲೂಕಿನಲ್ಲಿ 16 ಎಕರೆ ಜಮೀನು ಖರೀದಿ ಮಾಡಿದೆ. ಇಲ್ಲಿ ಪ್ಯಾಕಿಂಗ್ ಮತ್ತು ನಂದಿನಿಯ ಉಪ ಉತ್ಪನ್ನಗಳನ್ನ ತಯಾರು ಮಾಡುವ ಘಟಕ ನಿರ್ಮಾಣವಾಗಲಿದೆ. ವಿದ್ಯಾರ್ಥಿಗಳು ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಬೇಕು. - ಧೀರಜ್ ಮುನಿರಾಜು ಶಾಸಕ ಮುಂದಿನ ದಿನಗಳಲ್ಲಿ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನ 5 ರೂ. ಹೆಚ್ಚಿಸುವುದಾಗಿ ಸಿಎಂ, ಡಿಸಿಎಂ, ಸಚಿವರು ತಿಳಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷ ಟೀಕೆ ಮಾಡಬಾರದು, ನೇರವಾಗಿ ರೈತರಿಗೆ ಅನುಕೂಲವಾಗುತ್ತದೆ. ಯಾರೂ ವಿರೋಧ ಮಾಡಬಾರದು. ಎಚ್.ಪಿ.ರಾಜಕುಮಾರ್ - ಬಮುಲ್ ಅಧ್ಯಕ್ಷ