

ಹುಬ್ಬಳ್ಳಿ: ಪ್ರತಿ ದಿನ ಬೆಡ್ಗಳನ್ನು ಸ್ವಚ್ಛವಾಗಿಡಬೇಕು. ಗುತ್ತಿಗೆ ಪಡೆದವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಾರೋ ಇಲ್ಲವೋ? ಸರಿಯಾಗಿ ಕೆಲಸ ಮಾಡದಿದ್ದರೆ ಹೇಳಿ. ಸರ್ಕಾರ ಹಾಗೂ ದಾನಿಗಳು ನೀಡಿರುವ ಎಲ್ಲ ವೈದ್ಯಕೀಯ ಉಪಕರಣಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಖಡಕ್ ಸೂಚನೆ ನೀಡಿದರು.
ನಗರದ ಕಿಮ್್ಸ ಆಡಳಿತ ಭವನದಲ್ಲಿ ಭಾನುವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ದಟ್ಟಣೆ ಹೆಚ್ಚುತ್ತಿದೆ. ಬೆಳಗ್ಗೆ 8ಗಂಟೆಗೆ ನೋಂದಣಿ ಪ್ರಕ್ರಿಯೆ ಆರಂಭಿಸುವುದರ ಜತೆಗೆ ವಿಭಾಗವನ್ನು ವಿಸ್ತರಿಸಬೇಕು. ನೋಂದಣಿ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು. ಹೊರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭಿಸಬೇಕು. ಈಗಿರುವ ಕೇಂದ್ರಗಳನ್ನು 8ರಿಂದ 16ಕ್ಕೆ ಹೆಚ್ಚಿಸಬೇಕು. ಎರಡಿರುವ ಲ್ಯಾಬ್ಗಳನ್ನು 8ಕ್ಕೆ ಹೆಚ್ಚಿಸಲು ಸೂಚಿಸಿದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆನ್ಲೈನ್ ನೋಂದಣಿಗೆ ಆದ್ಯತೆ ನೀಡಬೇಕು. ಇದರಿಂದ ವೇಗ ಹೆಚ್ಚಲಿದ್ದು, ವೈದ್ಯರು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ಆಸ್ಪತ್ರೆಯಿದು. ಇಲ್ಲಿಗೆ ಬರುವ ರೋಗಿಗಳಿಗೆ ಸೂಕ್ತ, ಗುಣಮಟ್ಟದ ಚಿಕಿತ್ಸೆ ದೊರೆಯಬೇಕು ಎಂಬುವುದು ಸರ್ಕಾರದ ಉದ್ದೇಶವಾಗಿದೆ. ಹಾಸಿಗೆ, ಔಷಧ, ಆಕ್ಸಿಜನ್ ಸೇರಿ ಇತರ ವೈದ್ಯಕೀಯ ಸೌಕರ್ಯ ಕೊರತೆಯಾದರೆ ಕೂಡಲೇ ಸರ್ಕಾರಕ್ಕೆ ಗಮನಕ್ಕೆ ತಂದರೆ ಒದಗಿಸಲಾಗುವುದು ಎಂದು ತಿಳಿಸಿದರು.
ತುರ್ತಚಿಕಿತ್ಸಾ ವಿಭಾಗಕ್ಕೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಸದ್ಯ ಜನರಲ್ ಶಸ್ತ್ರ ಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ ಹಾಗೂ ಎಲುಬು ಮತ್ತು ಕೀಲುಗಳ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಇನ್ನಷ್ಟು ವಿಸ್ತರಿಸಬೇಕು. ಐಸಿಯು ಹಾಸಿಗೆಗಳ ಸಂಖ್ಯೆ ಹಾಗೂ 2 ಶಸ್ತ್ರಚಿಕಿತ್ಸಾ ಥಿಯೇಟರ್ (ಒಟಿ) ಹೆಚ್ಚಿಸಬೇಕು ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅವರಿಗೆ ಸೂಚಿಸಿದರು.
ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ತುರ್ತು ಚಿಕಿತ್ಸಾ ಘಟಕ, ತಾಯಿ ಹಾಗೂ ಮಕ್ಕಳ ಆಸ್ಪತ್ರೆ, ಶವಾಗಾರ, ಸುಟ್ಟ ಗಾಯ ಹಾಗೂ ಕ್ಯಾನ್ಸರ್ ವಿಭಾಗ ಸೇರಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ.ಜಿ.ಬಿ. ಸತ್ತೂರ, ಡಾ. ರಾಜಶೇಖರ ದ್ಯಾಬೇರಿ, ಡಾ. ಎಸ್.ವೈ. ಮುಲ್ಕಿಪಾಟೀಲ, ಡಾ. ಈಶ್ವರ ಹಸಬಿ, ಡಾ. ಲಕ್ಷ್ಮೀಕಾಂತ ಲೋಕರೆ ಇತರರು ಇದ್ದರು.
ಮುಂಬಡ್ತಿಗೆ ಕೋನರಡ್ಡಿ ಗರಂ: ಸಚಿವರು, ವೈದ್ಯರಿಗೆ ಮುಂಬಡ್ತಿ ವಿಷಯ ಕೇಳಿದ ತಕ್ಷಣ ಇನ್ನೂ ಆಗಿಲ್ಲವೆಂಬ ಅಸಮಾಧಾನ ಹೊರಬಿತ್ತು. ಆಗ ಮಧ್ಯೆ ಪ್ರವೇಶಿಸಿದ ಶಾಸಕ ಎನ್.ಎಚ್. ಕೋನರಡ್ಡಿ, ವೈದ್ಯರು ಹಾಗೂ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮುಂಬಡ್ತಿ ನೀಡುವುದರಲ್ಲಿ ತಾರತಮ್ಯವಾಗಿದೆ. ಕಳೆದ 10-15ವರ್ಷದಿಂದ ಮುಂಬಡ್ತಿ ಸಿಕ್ಕಿಲ್ಲ. ಬೇಕಾದವರಿಗೆ ಮಾತ್ರ ಮಾಡಲಾಗುತ್ತಿದೆ ಎಂದು ದೂರಿದರು.