ಸರ್ಕಾರಿ ಕಾನೂನು ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಿಸಿ

Advocate
Published on

ಮೈಸೂರು: ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ಬರುವ ಕಾನೂನು ಪದವಿ ವಿದ್ಯಾರ್ಥಿಗಳ ಪ್ರವೇಶಾತಿ ನೀಡುವುದರಲ್ಲಿ ಕಾಲೇಜುಗಳಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಹೀಗಾಗಿ ಸರ್ಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಿಸಬೇಕು, ಕಡಿಮೆ ಅಂಕ ಪಡೆದವರಿಗೂ ಕಾನೂನು ವಿದ್ಯಾಭ್ಯಾಸಕ್ಕೆ ಪ್ರವೇಶ ನೀಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ(ರೈತ ಪರ್ವ) ಅಧ್ಯಕ್ಷ ಬಿ.ಶಿವಣ್ಣ ಆಗ್ರಹಿಸಿದರು.

ಕಾನೂನು ತಿಳಿದ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯಕ್ಕೆ ಭದ್ರ ಬುನಾದಿ ಹಾಕುವವರಾಗಿದ್ದಾರೆ. ಆದರೆ, ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟ ಕಾನೂನು ಕಾಲೇಜುಗಳು, ಕಾನೂನನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುತ್ತಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ರಾಜ್ಯದಲ್ಲಿ 7ರಿಂದ 9 ಸರ್ಕಾರಿ ಕಾನೂನು ಪದವಿ ಕಾಲೇಜುಗಳಿದ್ದು, ಸುಮಾರು 106 ಖಾಸಗಿ ಕಾಲೇಜುಗಳಿವೆ. ಆದರೆ, ಖಾಸಗಿ ಕಾಲೇಜುಗಳಲ್ಲಿ ಸಂವಿಧಾನ ಮತ್ತು ಸರ್ಕಾರಿ ನಿಯಮದ ಪ್ರಕಾರ ಬಡವರು, ರೈತರ ಮಕ್ಕಳಿಗೆ ಹಲವಾರು ಕಾರಣ ನೀಡಿ ಪ್ರವೇಶಾವಕಾಶ ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಹೀಗಾಗಿ ಸರ್ಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಿಸಬೇಕು. ಏಕರೂಪದ ಶುಲ್ಕ ನೀತಿ ಇರಬೇಕೆಂದು ಒತ್ತಾಯಿಸಿದರು. ಪಕ್ಷದ ಪದಾಧಿಕಾರಿಗಳಾದ ಮಂಜು, ಆರ್.ಶ್ರೀನಿವಾಸ್, ಮೋಹನ್‌ದಾಸ್, ಪಿ.ಕುಮಾರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net