ಮೈಸೂರು ನಗರದಲ್ಲೇ ಕಡಿಮೆ ಇರುವ ಮತ ಪ್ರಮಾಣ ಹೆಚ್ಚಿಸಿ

mysore
Published on

ಮೈಸೂರು: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಕಡಿಮೆ ಇದ್ದು, ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಲು ಅಗತ್ಯ ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಅಪರ ಮುಖ್ಯ ಚುನಾವಣಾಧಿಕಾರಿ ಎಂ.ಕೂರ್ಮ ರಾವ್ ತಿಳಿಸಿದರು.


ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವೀಪ್ ಸಮಿತಿ ಸಭೆಯಲ್ಲಿ ಮಾತನಾಡಿದರು.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ನಗರ ಪ್ರದೇಶದ ಕ್ಷೇತ್ರಗಳಾದ ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಈ ಕ್ಷೇತ್ರಗಳ ಯಾವ ಮತಗಟ್ಟೆಗಳಲ್ಲಿ ಕಡಿಮೆ ಮತದಾನ ಎಂಬದನ್ನು ಗುರುತಿಸಿ ಆ ವ್ಯಾಪ್ತಿಯಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು


ಮತದಾನ ಕಡಿಮೆಯಾಗಲು ಕೆಲವರು ಬೇರೆ ಪ್ರದೇಶಗಳಲ್ಲಿ ವಲಸೆ ಹೋಗಿರುತ್ತಾರೆ. ಅವರ ಹೆಸರನ್ನು ಅವರು ಇರುವ ಮತಗಟ್ಟೆಗೆ ಅರ್ಜಿ ನಮೂನೆ 8ನ್ನು ನೀಡಿ ವರ್ಗಾವಣೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಇದರಿಂದ ಅವರು ಇರುವ ಕಡೆ ಮತದಾನ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು


ಚುನಾವಣಾ ಸಾಕ್ಷರತಾ ಕ್ಲಬ್‌ಗಳ ಮೂಲಕ ವ್ಯವಸ್ಥಿತ ಕಾರ್ಯಕ್ರಮ ಹಮ್ಮಿಕೊಂಡು ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಮತದಾನದ ಮಹತ್ವ ಕುರಿತು ಒಂದು ನಿಮಿಷದ ಕಿರು ಚಿತ್ರಗಳ ಸ್ಪರ್ಧೆ ಆಯೋಜನೆ ಮಾಡಬೇಕು. ವಿಜೇತರಿಗೆ ಬಹುಮಾನಗಳನ್ನು ನೀಡಬೇಕು. ಉತ್ತಮ ಕಿರು ಚಿತ್ರಗಳನ್ನು ಮತದಾನ ಜಾಗೃತಿಯಲ್ಲಿ ಬಳಸಿಕೊಳ್ಳಬೇಕು ಎಂದರು.


ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ 822 ಚುನಾವಣಾ ಸಾಕ್ಷರತಾ ಕ್ಲಬ್ ಗಳನ್ನು ಸ್ಥಾಪಿಸಲಾಗಿದೆ. ಈ ಸಾಕ್ಷರತಾ ಕ್ಲಬ್‌ಗಳ ಮೂಲಕ ಮತದಾನ ಕುರಿತು ಜಾಥಾ, ಚಿತ್ರಕಲೆ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಉಪ ಆಯುಕ್ತ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಬಿಎಲ್‌ಒಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net