ಜನಪದ ಕಲಾವಿದರ ಗೌರವ ಧನ ಹೆಚ್ಚಿಸಿ

22 kdr 2
ಕಡೂರಿನ ಕನ್ನಡ ಭವನದಲ್ಲಿ ಕನ್ನಡ ಜಾನಪದ ಪರಿಷತ ತಾಲೂಕು ಘಟಕದ ಅಧ್ಯಕ್ಷ ಚಿಕ್ಕನಲ್ಲೂರು ರೇವಣಸಿದ್ದಪ್ಪಗೆ ನೇಮಕಾತಿ ಪತ್ರವನ್ನು ಪರಿಷತ್ ರಾಜಾಧ್ಯಕ್ಷ ಬಾಲಾಜಿ ವಿತರಿಸಿದರು. ಸೂರಿ ಶ್ರೀನಿವಾಸ್, ಓಣಿತೋಟ ರತ್ನಾಕರ್, ಸಿಂಗಟಗೆರೆ ಸಿದ್ದಪ್ಪ ಮತ್ತಿತರಿದ್ದರು.
Published on

ಕಡೂರು: ಜಾನಪದ ಕಲಾವಿದರಿಗೆ ಸಿಗಬೇಕಾದ ಗೌರವ ಮತ್ತು ಮನ್ನಣೆ ಸಿಗುತ್ತಿಲ್ಲ .ಶಿಷ್ಟ ಸಾಹಿತ್ಯಕ್ಕಿರುವ ಮೌಲ್ಯ ಜನಪದ ಸಾಹಿತ್ಯಕ್ಕೆ ಇಲ್ಲದಿರುವುದು ಹಾಗೂ ಜನಪದರನ್ನು ಕೀಳುಮಟ್ಟದಲ್ಲಿ ಕಾಣುತ್ತಿರುವುದು ವಿಷಾದನೀಯ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ ನೂತನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಾನಪದ ಕಲಾವಿದರ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಜನಪದ ಕಲಾವಿದರಿಗೆ ಸಿಗಬೇಕಾದ ಗೌರವ ಧನ ಹೆಚ್ಚಿಸಲು ಸರ್ಕಾರ ಗಮನಹರಿಸ ಬೇಕಿದೆ. ಸರ್ಕಾರಗಳು ಜನಪದರ ಕಲೆಗೆ ಹೆಚ್ಚು ಮನ್ನಣೆ ಹಾಗೂ ಗೌರವ ನೀಡಬೇಕಿದೆ ಎಂದರು.
ಜನಪದರಲ್ಲಿ ಜಾತಿ, ಮತ ಧರ್ಮಗಳನ್ನು ಕಾಣಲು ಸಾಧ್ಯವಿಲ್ಲ . ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಕೃಷಿಕರು ತಮ್ಮ ದಣಿವು ನಿವಾರಿಸಿಕೊಳ್ಳಲು ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ಮಲೆನಾಡಿನ ಅಂಟಿಕೆ, ಪಿಂಟಿಕೆ ಹಾಗೂ ನಮ್ಮ ಜಿಲ್ಲೆಯ ಜಾನಪದ ಪ್ರಕಾರಗಳನ್ನು ಉಳಿಸಬೇಕಾಗಿದೆ ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್, ನೂತನ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ರೇವಣಸಿದ್ದಪ್ಪ ಚಿಕ್ಕನಲ್ಲೂರು ಸೇವಾ ದೀಕ್ಷೆ ಸ್ವೀಕರಿಸಿದರು. ಕಡೂರಿನ ಸಾಹಿತಿಗಳಾದ ಎಸ್. ಪರಮೇಶ್ವರಪ್ಪ ಪ್ರಮಾಣ ವಚನ ಬೋಧಿಸಿದರು. ಪರಿಷತ್ ಗೌರವಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಗಿರಿಯಾಪುರದ ಶಿವಲಿಂಗಸ್ವಾಮಿ, ಬಿಸಲೆರೆ ಕೆಂಪರಾಜು, ಚಿಕ್ಕ ನಲ್ಲೂರು ಕ್ಷೇತ್ರಪಾಲ್, ಜಯಣ್ಣ, ತಿಪ್ಪೇಶ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ್, ಕುಪ್ಪಾಳು ಶಾಂತಮೂರ್ತಿ, ಇಮ್ರಾನ್ ಅಹಮದ್ ಬೇಗ್, ಶಶಿಧರ, ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net