

ಶ್ರವಣಬೆಳಗೊಳ: ಬಿಜೆಪಿಯನ್ನು ಸದೃಢಗೊಳಿಸಿ ಮುಂದಿನ ಅವಧಿಗೆ ಅಧಿಕಾರಕ್ಕೆ ಬರಬೇಕಾದರೆ ಹೋಬಳಿ ಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸಿ, ಉತ್ಸಾಹವನ್ನು ಹೆಚ್ಚಿಸಬೇಕಾಗಿದೆ ಎಂದು ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್ ಹೇಳಿದರು.
ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ಬಿಜೆಪಿ ಜನಸಂಪರ್ಕ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷವಿದೆ. ಆದರೆ ಈಗಿನಿಂದಲೇ ಬೇರುಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ನಿಯಮಿತವಾಗಿ ಸಭೆಗಳನ್ನು ಆಯೋಜಿಸಿ ಸಂಘಟನೆಯ ಗುರಿ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆಗಳ ಅಗತ್ಯವಿದೆ. ಹಿರಿಯ ನಾಯಕರೊಂದಿಗೆ ಹೋಬಳಿ ಮಟ್ಟದ ಕಾರ್ಯಕರ್ತರಿಗೆ ನೇರ ಸಂಪರ್ಕದೊಂದಿಗೆ ರೂಪುರೇಷೆ ತಯಾರಾಗಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕರ್ತರ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಎತ್ತಿ ಹಿಡಿದು ಅವುಗಳನ್ನು ಪರಿಹರಿಸಲು ಪ್ರಯತ್ನ ಮಾಡಬೇಕು. ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಶೈಕ್ಷಣಿಕ ಸಹಾಯ ಯೋಜನೆಗಳು, ಯುವ ಸಮಾವೇಶ ಮತ್ತು ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಕರಿಗೆ ಪ್ರಮುಖ ಜವಾಬ್ದಾರಿ ನೀಡಿದರೆ, ಕಾರ್ಯಕರ್ತರಿಗೆ ಪಕ್ಷದೊಂದಿಗೆ ಆತ್ಮೀಯ ಸಂಬಂಧ ಹೆಚ್ಚಾಗುತ್ತದೆ ಮತ್ತು ಅವರು ಹೆಚ್ಚು ಉತ್ಸಾಹದಿಂದ, ನಿಷ್ಠೆಯಿಂದ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.
ತಾಲೂಕಿನ ಪ್ರತಿ ಹೋಬಳಿ ಕೇಂದ್ರಗಳಲ್ಲೂ ಜನಸಂಪರ್ಕ ಕಚೇರಿಗಳನ್ನು ತೆರೆಯಲಾಗುವುದು ಹಾಗೂ ಪ್ರತಿ ಹೋಬಳಿ ಕೇಂದ್ರಕ್ಕೂ ಒಂದೊಂದು ವಾಹನವನ್ನು ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ದಮ್ಮನಿಂಗಳ ರವಿ, ಮುಖಂಡರಾದ ನಂಜುಂಡ ಮೈಮ್, ಜಗದೀಶ್, ರೂಪೇಶ್, ಸತೀಶ್ ಗೌಡಗೆರೆ, ಕಿರಣ್ ಕೊತ್ತನಘಟ್ಟ, ಮಂಜುನಾಥ್ ಜಿನ್ನಾಥಪುರ, ಗೋಪಾಲ್ ಜಿನ್ನೇಹಳ್ಳಿ, ಮಂಜು ಗುರಿಗಾರನಹಳ್ಳಿ, ಜಯಕುಮಾರ್, ಸಂತೋಷ್, ರಂಗೇಗೌಡ, ಶಾಂತಕುಮಾರ್ ಮಡಬ, ವರದರಾಜು ಇತರರು ಇದ್ದರು.