

ಬೆಟ್ಟದಪುರ: ಮೊದಲ ಮಹಿಳಾ ಶಿಕ್ಷಕಿ ಎಂದು ಹೆಸರುವಾಸಿಯಾಗಿರುವ ಸಾವಿತ್ರಿಬಾಯಿ ಫುಲೆ ಅವರು ತಮ್ಮ ಹೋರಾಟದ ಮೂಲಕ ಇಂದಿನ ಶಿಕ್ಷಕರು, ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದಾರೆ ಎಂದು ಮಡಿಕೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಕೆ.ಬಸವರಾಜು ಹೇಳಿದರು.
ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಪ್ರವರ್ತಕರಾದ ಸಾವಿತ್ರಿಬಾಯಿ ತಮ್ಮ ಜೀವಿತಾವಧಿಯಲ್ಲಿ ಹಿಂದುಳಿದ ಸಮುದಾಯಗಳನ್ನು ಸಬಲೀಕರಣಕ್ಕೆ ಶ್ರಮಿಸಿದರು ಎಂದರು.
ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಿಗುವ ಶಿಕ್ಷಣಕ್ಕೆ ತನ್ನದೇ ಆದ ವಿಶೇಷತೆ ಇದೆ. ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಇಂದು ಈ ಹುದ್ದೆ ಅಲಂಕರಿಸಿದ್ದು, ಈ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸದಾ ಹೆಚ್ಚಾಗಲಿ ಎಂದರು.
ಮುಖಂಡರಾದ ಎಚ್.ಟಿ.ಗೋವಿಂದೆಗೌಡ, ಜಯರಾಮೇಗೌಡ, ಸಫಿ, ಆನಂದ್, ಹರೀಶ್ ಶಾಲೆ ಮುಖ್ಯಶಿಕ್ಷಕ ಕೆ.ಸಿ ಸತೀಶ್, ಶಿಕ್ಷಕರಾದ ಎಂ.ವಿದ್ಯಾಶ್ರೀ, ಸಾಜಿಯ ಪರ್ವೀನ್, ಉಮಾಶ್ರೀ, ಚಂದ್ರಶೇಖರ್, ನಾಗರತ್ನಾ, ರುಕ್ಷ್ಮಿಣಿ, ಸ್ವಾತಿ, ನಂದಿನಿ, ಜಬಿನ, ಯಶೋದಮ್ಮ ಇದ್ದರು.