

ರಟ್ಟಿಹಳ್ಳಿ: ಹೊಸ ಬಜೆಟ್ನಲ್ಲಿ ತಸ್ತಿಕ್ ಮೊತ್ತವನ್ನು ವರ್ಷಕ್ಕೆ 1.20 ಲಕ್ಷ ರೂಪಾಯಿಗೆ ಹೆಚ್ಚಳ, ಅರ್ಚಕರಿಗೆ ಮಾಸಿಕ 10 ಸಾವಿರ ಗೌರವಧನ ನೀಡಬೇಕು ಎಂದು ರಾಜ್ಯ ಮುಜರಾಯಿ ಅರ್ಚಕರ ಹಾಗೂ ನೌಕರರ ಸಂಘದ ಅಧ್ಯಕ್ಷ ಆಗಮ ವಿದ್ವಾನ್ ಶ್ರೀವತ್ಸ ಮನವಿ ಮಾಡಿದರು.
ಪಟ್ಟಣದ ಕಬ್ಬಿಣಕಂತಿ ಮಠದಲ್ಲಿ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ನೌಕರರ ಸಂಘ, ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರು, ಪೂಜಾರರ ಕ್ಷೇಮಾಭಿವೃದ್ಧಿ ಸಂಘ ಹಿರೇಕೆರೂರ, ರಟ್ಟಿಹಳ್ಳಿ ಮತ್ತು ರಾಣೆಬೆನ್ನೂರ ತಾಲೂಕು ಅರ್ಚಕರ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಅರ್ಚಕರು ಹಾಗೂ ಪೂಜಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ವಂಶಪಾರಂಪರ್ಯವಾಗಿ ಪೂಜೆ ಮಾಡುತ್ತಿರುವ ಅರ್ಚಕರಿಗೆ ಪೂಜಾ ಸಾಮಗ್ರಿ ಖರೀದಿಗೆ ತಸ್ತಿಕ್ ಮೊತ್ತವಾಗಿ ತಿಂಗಳಿಗೆ 5 ಸಾವಿರದಂತೆ ವರ್ಷಕ್ಕೆ 60 ಸಾವಿರ ರೂಪಾಯಿ ನೀಡಲಾಗುತ್ತದೆ. ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದರಿಂದ ಪ್ರತಿ ತಿಂಗಳು 12 ಸಾವಿರ ರೂಪಾಯಿಗೆ ತಸ್ತಿಕ್ ಮೊತ್ತ ಹೆಚ್ಚಿಸಬೇಕು. ದೇವಾಲಯಗಳಲ್ಲಿ ನಿತ್ಯಪೂಜಾ ಕೈಂಕರ್ಯ ಕೈಗೊಳ್ಳುವ ಅರ್ಚಕರಿಗೆ ಯಾವುದೇ ಗೌರವಧನ ಇಲ್ಲ. ಸರ್ಕಾರ ಶೀಘ್ರವೇ ಮಾಸಿಕವಾಗಿ 10 ಸಾವಿರ ಗೌರವಧನ ನೀಡಬೇಕು ಎಂದರು.
ಸುಮಾರು 55 ವರ್ಷಗಳಿಂದ ಸಂಘದಿಂದ ಅರ್ಚಕರ ಮತ್ತು ಪೂಜಾರರ ನಿತ್ಯ ಸಮಸ್ಯೆಗಳಿಗೆ ಕಷ್ಟ-ಕಾರ್ಪಣ್ಯಗಳಿಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಸ್ಪಂದಿಸುತ್ತ ಬರಲಾಗಿದೆ. ದಾವಣಗೆರೆಯಲ್ಲಿ ಮುಂದಿನ ದಿನಗಳಲ್ಲಿ 15 ದಿವಸಗಳ ಕಾಲ ಅರ್ಚಕರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. ಅರ್ಚಕರು ದೇವಾಲಯಗಳಲ್ಲಿ ಸ್ವಚ್ಛತೆ, ಶುಚಿತ್ವ ಮತ್ತು ಪೂಜಾ ವಿಧಿವಿಧಾನಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಿರ್ವಹಿಸಬೇಕು ಎಂದರು.
ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು ಅರ್ಚಕರಿಗೆ ಅನೇಕ ಸವಲತ್ತು ನೀಡಿದ್ದಾರೆ. ಉಚಿತವಾಗಿ ಕಾಶಿ-ಗಯಾ ಯಾತ್ರೆ, ಮರಣ ಹೊಂದಿದ ಅರ್ಚಕರ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ, ವಿದ್ಯಾರ್ಥಿ ವೇತನ ಹೀಗೆ ಹಲವು ಸೌಲಭ್ಯ ನೀಡಿದ್ದಾರೆ. ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ವಂಶಪಾರಂಪರ್ಯವಾಗಿ ಅರ್ಚಕರು ಮರಣ ಹೊಂದಿದರೆ, ಅವರ ಕುಟುಂಬದ ಮಕ್ಕಳಿಗೆ ನೇಮಕಾತಿಯನ್ನು ತಾಲೂಕು ಮಟ್ಟದ ತಹಸೀಲ್ದಾರ್ ಕಚೇರಿಯಲ್ಲಿ ಆದೇಶ ನೀಡಲಾಗುತ್ತಿದೆ. ಅರ್ಚಕರ ಅನೇಕ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ವಿಜಯ ವೀರಪ್ಪ ಪೂಜಾರ ಮಾತನಾಡಿ, ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ಸುಮಾರು 200 ಮುಜರಾಯಿ ದೇವಾಲಯಗಳಿವೆ. ಅರ್ಚಕರ ಸಮಸ್ಯೆಗಳ ಪರಿಹಾರಕ್ಕೆ ಅರ್ಚಕರ ಭವನವು ಅವಶ್ಯವಿದ್ದು, ರಟ್ಟಿಹಳ್ಳಿ ಪಟ್ಟಣದಲ್ಲಿ ಭವನ ನಿರ್ವಣಕ್ಕೆ 2 ಗುಂಟೆ ಜಾಗವನ್ನು ನಿಗದಿ ಮಾಡಿ ಭವನ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿದರು. ನಿವೃತ್ತ ಅರಣ್ಯಾಧಿಕಾರಿ ಮಂಜುನಾಥ ತಂಬಾಕದ ಅವರು ಸಂಘದ ನಾಮಫಲಕ ಅನಾವರಣಗೊಳಿಸಿದರು.
ಸನ್ಮಾನ: ಹಿರಿಯ ಅರ್ಚಕರಾದ ರೇವಣೆಪ್ಪ ಪೂಜಾರ, ಗೋಪಾಲಚಾರ್ಯ ದ್ರೌಪಕ್ಕಳವರ, ನಾಗಪ್ಪ ಪೂಜಾರ, ಜಯಪ್ಪ ಅಂಗಡಿ, ಮೌನೇಶಪ್ಪ ಪೂಜಾರ, ರಾಮಪ್ಪ ಪೂಜಾರ, ಮಾಲತೇಶ ಕುಲಕರ್ಣಿ, ಗಿರೀಶ ನಾಡಿಗೇರ ಹಾಗೂ ಅರ್ಚಕರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯತು.
ರಾಮತೀರ್ಥನ್, ಡಾ.ಗುರುದೀಕ್ಷಿತ್, ಪ್ರಶಾಂತ, ತಿಪ್ಪೇಸ್ವಾಮಿ, ಶ್ರೀಪಾದ, ಪಿ.ಡಿ. ಬಸನಗೌಡ್ರು, ವೀರನಗೌಡ ಪ್ಯಾಟಿಗೌಡ್ರು, ಶಿವಾನಂದ ಪೂಜಾರ, ದೇವಿರಪ್ಪ ಪೂಜಾರ, ವಿ.ಜಿ. ಪೂಜಾರ, ಪ್ರಕಾಶ ಪೂಜಾರ, ರೇವಣೆಪ್ಪ ಪೂಜಾರ, ರವಿ ಪಾಟೀಲ, ಅಣ್ಣಪ್ಪ ಪೂಜಾರ, ರಾಮಪ್ಪ ಪೂಜಾರ, ಪ್ರಭು ಪೂಜಾರ, ವೀರಭದ್ರಪ್ಪ ಪೂಜಾರ, ಸಂಘದ ಸದಸ್ಯರು ಉಪಸ್ಥಿತರಿದ್ದರು.