ಬೇಸಿಗೆ ತಾಪ ಹೆಚ್ಚಳ, ಕಾಡ್ಗಿಚ್ಚಿನ ಆತಂಕ

Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭದ ಹಂತದಲ್ಲಿಯೇ ಉಷ್ಣಾಂಶ ಹೆಚ್ಚಳವಾಗಿದ್ದು ಈ ಅವಧಿಯಲ್ಲಿ ಪ್ರತಿ ವರ್ಷದಂತೆ ಕಾಡ್ಗಿಚ್ಚಿನ ಹೆಚ್ಚಳ ಪ್ರಕರಣಗಳಿಂದ ಅರಣ್ಯ ನಾಶವಾಗುವುದನ್ನು ತಡೆಯಲು ಸಂಬ0ಧಪಟ್ಟ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದೆ.

ಹೌದು! ಬೇಸಿಗೆಯಲ್ಲಿ ಹಸಿರು ಸಂಪತ್ತು, ಪ್ರಾಣಿ ಪಗಳು ಅಗ್ನಿಗಾಹುತಿಯಾಗುವುದನ್ನು ಅಸಹಾಯಕ ಸ್ಥಿತಿಯಲ್ಲಿ ನೋಡಬೇಕಾದ ಪರಿಸ್ಥಿತಿ ಇದೆ. ಹಿಂದಿನ ವರ್ಷಗಳಿಗೆ ಹೋಲಿಸಿದ್ದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಪರಿಹಾರ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಮತ್ತಷ್ಟು ಮುನ್ನೆಚ್ಚರಿಕೆಯ ಕ್ರಮಗಳ ಅಗತ್ಯವಿದೆ.

ಬೇಸಿಗೆ ಆರಂಭದ ನಡುವೆ ಈಗಾಗಲೇ ರಾಜ್ಯದ ವಿವಿಧೆಡೆ ಕಾಡ್ಗಿಚ್ಚಿಗೆ ಅರಣ್ಯ ನಾಶವಾಗುತ್ತಿದೆ. ಗಿಡ ಮರಗಳು, ಪ್ರಾಣಿಗಳು ಭಸ್ಮವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹಾಗೆಯೇ ಅಗ್ನಿಯ ರುದ್ರನರ್ತನ ನಿಲ್ಲಿಸಲು ಅಧಿಕಾರಿಗಳು ಹರಸಾಹಸ ಮಾಡಬೇಕಾಗಿದೆ. ಇದರ ನಡುವೆ ಜಿಲ್ಲೆಯಲ್ಲೂ ಕಾಡ್ಗಿಚ್ಚು ಸಮಸ್ಯೆಯು ಪ್ರಾರಂಭವಾಗಿದ್ದು ಅಲ್ಲಲ್ಲಿ ಬೆಟ್ಟ ಗುಡ್ಡ ತಪ್ಪಲಿನ ಅರಣ್ಯ ಪ್ರದೇಶ, ಸರ್ಕಾರಿ ಗೋಮಾಳ ಜಾಗ, ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಒಣ ಹುಲ್ಲುಗಾವಲಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ದೂರು ಬಂದ ತಕ್ಷಣ ಅರಣ್ಯ ಇಲಾಖೆಯು ತಾತ್ಕಾಲಿಕ ಪರಿಹಾರ ಕೆಲಸ ಕೈಗೊಳ್ಳುತ್ತಿದೆ. ಹಾಗೆಯೇ ಸ್ಥಳಿಯವಾಗಿ ಜಾಗೃತಿ ಮೂಡಿಸುತ್ತಿದೆ. ಆದರೆ, ಇದು ಮತ್ತಷ್ಟು ಹೆಚ್ಚಳವಾಗಬೇಕು. ಕೇವಲ ದಾಖಲೆ ನಿರ್ವಹಣೆ, ಟೀಕೆಗಳಿಗೆ ಪ್ರತ್ಯುತ್ತರ ನೀಡುವ ಲೆಕ್ಕಾಚಾರದಲ್ಲಿ ಮುಂಜಾಗ್ರತೆಯ ಜಪ ಮಾಡಲಾಗುತ್ತಿದೆ.

*ಉಷ್ಣಾಂಶ ಹೆಚ್ಚಳ

ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ನಿಧಾನವಾಗಿ ಹೆಚ್ಚಾಗುತ್ತಿದೆ. ಈಗಲೇ ಸರಾಸರಿ ಗರಿಷ್ಠ 31ಡಿಗ್ರಿ ಸೆಲ್ಸಿಯಷ್ ಉಷ್ಣಾಂಶ ಇದೆ. ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುತ್ತದೆ. ಮಾರ್ಚ್, ಏಪ್ರಿಲ್ನಲ್ಲಿ ಮಳೆಯಿಲ್ಲದೇ, ಹಾಗೆಯೇ ಸುಡು ಬಿಸಿಲಿಗೆ ತತ್ತರಿಸಬೇಕಾದ ಪರಿಸ್ಥಿತಿಯ ಇದೆ. ಕುಡಿಯುವ ನೀರಿನ ಹಾಹಾಕಾರ, ಮೇವಿನ ಕೊರತೆ ಕಾಡಲಿದ್ದು ಇದರ ಜತೆಗೆ ಅರಣ್ಯದಲ್ಲಿನ ಒಣಗಿದ ಮರ, ಸಮೃದ್ಧವಾಗಿ ಬೆಳೆದ ಹುಲ್ಲು ಬೆಂಕಿಗೆ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಕೂಡಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುವುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net