

ಸೊರಬ: ಮಾನವ ದೈವದ ಹಾದಿಯಲ್ಲಿ ನಡೆದಾಗ ಭಕ್ತಿಯ ಪರಾಕಾಷ್ಠೆ ತಲುಪಲು ಸಾಧ್ಯ ಎಂದು ಜಡೆ ಹಿರೇಮಠ ಹಾಗೂ ಕಾನಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾನುಕೇರಿ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ 111ನೇ ಮಾಸಿಕ ಅಮಾವಾಸ್ಯೆ ಪೂಜಾಭಿಷೇಕ, ಶಿವಾನುಭವ ಮತ್ತು ಚೌಡೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಗಳಿಂದಾಗಿ ಮಾನವನ ಜೀವನದಲ್ಲಿ ಆಧ್ಯಾತ್ಮ ಶಕ್ತಿ ವೃದ್ಧಿಸುತ್ತದೆ. ಪ್ರತಿಯೊಂದು ಹಬ್ಬವೂ ಹೊಸ ಬದಲಾವಣೆಯ ವಾತಾವರಣವನ್ನು ಎಲ್ಲರಲ್ಲೂ ಸೃಷ್ಟಿಸುತ್ತದೆ. ಪರಿಸರದಲ್ಲಿ ಬದಲಾವಣೆಗಳು ನೆಡೆಯುತ್ತಿರುವಂತೆ ನಮ್ಮ ಜೀವನದಲ್ಲೂ ಧಾರ್ಮಿಕ ಸತ್ಸಂಗಳಿಂದ ಬದಲಾವಣೆ ನಡೆಯಬೇಕು. ಪ್ರತಿಯೊಬ್ಬರ ಶರೀರವೂ ಕಾಲದ ಅಧೀನವಾಗಿದೆ. ಕಳೆದುಹೋದ ಸಮಯವನ್ನು ಹೇಗೆ ಮರಳಿ ಪಡೆಯಲು ಸಾಧ್ಯವಿಲ್ಲವೋ ಅದೇ ರೀತಿ ಇರುವ ಸಮಯವನ್ನು ಸ್ಮರಿಸಿಕೊಂಡು ಬದುಕುವುದನ್ನು ಕಲಿಯಬೇಕು ಎಂದರು.
ನಮ್ಮಲ್ಲಿ ಆಧ್ಯಾತ್ಮಿಕ ಶ್ರದ್ಧೆಯನ್ನು ಬೆಳೆಸಿಕೊಂಡು ದೈವದ ಪಾರಾಯಣವನ್ನು ಮಾಡಿದಾಗ ಡಾಂಭಿಕ ಭಕ್ತಿ ದೂರವಾಗುತ್ತದೆ. ಆಗ ಭಗವಂತನ ಧಯೆಯಿಂದ ಅಧ್ಯಾತ್ಮ ಶಕ್ತಿ ಪಡೆಯಲು ಸಾಧ್ಯ. ಮಾನವನ ದೇಹವು ದೇವಾಲಯವಿದ್ದಂತೆ. ನಮ್ಮಲ್ಲಿರುವ ದುಷ್ಟ ಗುಣಗಳನ್ನು ತೊರೆದು ಶಿಷ್ಟ ರಕ್ಷಣೆಯ ಹರಿಷಡ್ವರ್ಗಗಳ ತತ್ವಾದರ್ಶಗಳನ್ನು ಬೆಳೆಸಿಕೊಂಡು ನಡೆಯುವ ಅಗತ್ಯವಿದೆ ಎಂದು ಹೇಳಿದರು.
ನಿಜಗುಣ ಚಂದ್ರಶೇಖರ್, ನಾಗರಾಜ್ ಗುತ್ತಿ, ಮಂಜುನಾಥ, ಲತಾ ಮಹೇಶ್, ವನಜಾಕ್ಷಮ್ಮ, ರೇಣುಕಮ್ಮ ಗೌಳಿ, ಜಯಮಾಲಾ, ಸುಧಾ ಲಕ್ಷ್ಮೀಕಾಂತ್, ಪೂರ್ಣಿಮಾ, ಲಿಂಗರಾಜ್, ಮಲ್ಲಿಕಾರ್ಜುನ ಇತರರಿದ್ದರು.