

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ವಿದ್ಯಾರ್ಥಿಗಳು ಕಲಿಕೆ ಮತ್ತು ಭವಿಷ್ಯದಲ್ಲಿ ವೃತ್ತಿಪರತೆ ಹೆಚ್ಚಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗವು ಕವಿವಿ ವಜ್ರಮಹೋತ್ಸವ ಸ್ಮರಣಾರ್ಥ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಮತ್ತು ಪ್ರವಾಸೋದ್ಯಮ ವಿಭಾಗದಲ್ಲಿ ಡಾ.ಎಸ್. ರಾಜಶೇಖರ ನೂತನ ಗ್ರಂಥಾಲಯ ಉದ್ಘಾಟಸಿ ಅವರು ಮಾತನಾಡಿದರು.
ಬದಲಾದ ಮಾರುಕಟ್ಟೆಗೆ ತಕ್ಕಂತೆ ವಿದ್ಯಾರ್ಥಿಗಳು ಸಿದ್ಧಗೊಳ್ಳಬೇಕಾದ ಅವಶ್ಯಕತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಜ್ಞಾನ, ಭಾಷೆ, ಕೌಶಲ, ವೃತ್ತಿಪರ ತಂತ್ರಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಡಾ.ವಿನಯ್ ಎಸ್. ಮಾತನಾಡಿ, ಸ್ಪರ್ಧಾತ್ಮಕ ಮಾರುಕಟ್ಟೆಗೆ ತಂತ್ರಗಳು, ಕ್ಷೇತ್ರದ ಆಳವಾದ ಜ್ಞಾನ, ವ್ಯವಸ್ಥಿತ ಯೋಜನೆ, ಭಾಷೆ ಕೌಶಲ ಬಹಳ ಮುಖ್ಯ. ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು. ವಿಭಿನ್ನ ಯೋಚನೆ ಮೂಲಕ ಮಾರುಕಟ್ಟೆಗೆ ಪ್ರವೇಶಿಸಲು ಸಾಧ್ಯ. ಪ್ರಸ್ತುತ ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರ 75 ಬಿಲಿಯನ್ ಡಾಲರ್ ಮೊತ್ತದ ಮಾರುಕಟ್ಟೆ ಅಗಾಧವಾಗಿ ಬೆಳೆದಿದ್ದು, ಮುಂದಿನ 3 ವರ್ಷಗಳಲ್ಲಿ 125 ಬಿಲಿಯನ್ ಡಾಲರ್ ಮಾರುಕಟ್ಟೆ ಹೊಂದಲಿದೆ. ಹೀಗಾಗಿ ಭಾರತೀಯ ಪ್ರವಾಸೋದ್ಯಮ ಕ್ಷೇತ್ರ ಜಗತ್ತಿನಲ್ಲಿ 2ನೇ ಸ್ಥಾನ ಹೊಂದಿದೆ. ವಿದ್ಯಾರ್ಥಿಗಳು ಪ್ರವಾಸೋದ್ಯಮ ಕ್ಷೇತ್ರವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಆ ಕ್ಷೇತ್ರದ ಸಂಪೂರ್ಣ ಜ್ಞಾನ ತಿಳಿಯಲು ಸಾಧ್ಯ ಎಂದರು.
ಪ್ರೊ.ಎಸ್.ರಾಜಶೇಖರ ಮಾತನಾಡಿದರು. ಪ್ರವಾಸೋದ್ಯಮ ವಿಭಾಗದಲ್ಲಿ ಡಾ.ಎಸ್.ರಾಜಶೇಖರ ನೂತನ ಗ್ರಂಥಾಲಯವನ್ನು ಕವಿವಿ ಕುಲಪತಿ ಪ್ರೊ. ಕೆ.ಬಿಗುಡಸಿ ಉದ್ಘಾಟಿಸಿದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್ ರಾಜಶೇಖರ ಅವರು 12 ಲಕ್ಷ ರೂ. ಮೌಲ್ಯದ 1,500 ವಿವಿಧ ವಿಷಯದ ಪುಸ್ತಕಗಳನ್ನು ದೇಣಿಗೆ ನೀಡಿದರು.
ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ, ಪ್ರೊ.ಚಂದ್ರಮಾ, ಪ್ರೊ. ಸಿ.ಕೃಷ್ಣಮೂರ್ತಿ, ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ. ಜಗದೀಶ ಕೆ., ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.