

ಗಜೇಂದ್ರಗಡ: ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಶನಿವಾರ ಮಹಿಳಾ ಕೂಲಿಕಾರರ ಸಭೆ ಹಾಗೂ ಸಂವಾದ ಜರುಗಿತು. ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವ ಕುರಿತು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಹಾಗೂ ಮಹಿಳಾ ಕೂಲಿಕಾರರೊಂದಿಗೆ ಜಿಲ್ಲಾ ನರೇಗಾ ತಂಡ ಸಂವಾದ ನಡೆಸಿತು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ.47ರಷ್ಟು ಸಾಧಿಸಿದ್ದು, ಇದನ್ನು ಶೇ. 60ಕ್ಕೆ ಹೆಚ್ಚಿಸಲು ಮಹಿಳಾ ಕೂಲಿಕಾರರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಲಾಯಿತು.
ನರೇಗಾ ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ. ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ ಮಹಿಳೆಯರು, ಅಂಗವಿಕಲರಿಗೆ ಕೆಲಸದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳಾಜಿರಾವ್ ಬೋಸ್ಲೆ, ಟಿಐಇಸಿ ಸಂಯೋಜಕ ಮಂಜುನಾಥ ಹಳ್ಳದ, ರವಿ ಹೊಂಬಳ, ಗ್ರಾಮ ಕಾಯಕ ಮಿತ್ರರಾದ ಕವಿತಾ ಹಿರೇಮಠ, ಗ್ರಾಪಂ ಸಿಬ್ಬಂದಿ ಬಸವರಾಜ, ಕಾಯಕ ಬಂಧುಗಳು, ಇತರರಿದ್ದರು.