

ವಿಕ್ರಮ ನಾಡಿಗೇರ ಧಾರವಾಡ
ರಾಜ್ಯ ವಿಧಾನಸಭೆ ಚುನಾವಣೆ ಮುಗಿದ 10 ತಿಂಗಳಲ್ಲೇ ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಜಿಲ್ಲಾಡಳಿತ ಈಗಾಗಲೇ ಭರದ ಸಿದ್ಧತೆ ನಡೆಸಿದ್ದು, ಮತದಾರರ ಪಟ್ಟಿ ಸಹ ಸಿದ್ಧವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಇದ್ದ ಮತದಾರರು ಹಾಗೂ ಸದ್ಯ ಸಿದ್ಧವಾದ ಪಟ್ಟಿಗೆ ಹೋಲಿಸಿದರೆ, ಜಿಲ್ಲೆಯಲ್ಲಿ 37,294 ಮತದಾರರು ಹೊಸದಾಗಿ ಸೇರ್ಪಡೆಯಾಗಿರುವುದು ವಿಶೇಷ.
ಧಾರವಾಡ ಲೋಕಸಭೆ ಕ್ಷೇತ್ರ ಹಾವೇರಿ ಜಿಲ್ಲೆಯ ಒಂದು ವಿಧಾನಸಭೆ (ಶಿಗ್ಗಾಂವಿ) ಕ್ಷೇತ್ರವನ್ನೂ ಒಳಗೊಂಡಿದೆ. ಹೀಗಾಗಿ ಒಟ್ಟು 8 ವಿಧಾನಸಭೆ ವ್ಯಾಪ್ತಿಯಲ್ಲಿ ಪುರುಷರು 8,99,246, ಮಹಿಳೆಯರು 8,92,043 ಹಾಗೂ ಇತರೆ 97 ಜನರು ಸೇರಿ ಒಟ್ಟು 17,91,386 ಮತದಾರರು ಮತದಾನ ಮಾಡಲಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ 7 ವಿಧಾನಸಭೆ ಚುನಾವಣೆಯಲ್ಲಿ ಪುರುಷರು 7,65,160, ಮಹಿಳೆಯರು 7,57,831 ಹಾಗೂ ಇತರೆ 89 ಜನ ಸೇರಿ ಒಟ್ಟು 15,23,080 ಮತದಾರರು (ಮೇ 5ರ ಮಾಹಿತಿ) ಪಟ್ಟಿಯಲ್ಲಿದ್ದರು. ನಂತರದ 10 ತಿಂಗಳ ಅವಧಿಯಲ್ಲಿ 18 ವರ್ಷ ತುಂಬಿದವರು, ಮತ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರು ಸೇರಿ ಇತರರು ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ಹೀಗಾಗಿ 37,294 ಹೊಸ ಮತದಾರರ ಸೇರ್ಪಡೆಯಾಗಿದೆ. ಮತದಾರರ ಯಾದಿಯ ವಿಶೇಷ ಪರಿಷ್ಕರಣೆ&2024ರಲ್ಲಿ ಒಟ್ಟು 10,783 ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದು ವಿಶೇಷವಾಗಿದೆ.
ಮತದಾರರು ಗಮನಿಸಲಿಪ್ರತಿ ಚುನಾವಣೆ ಮತದಾನ ಸಮಯದಲ್ಲಿ ಹೆಸರು ಬಿಟ್ಟು ಹೋಗಿದೆ ಎಂದು ಮತದಾನಕ್ಕೆ ಆಗಮಿಸಿದಾಗ ಆರೋಪಿಸುವುದು ಸಾಮಾನ್ಯ. ಚುನಾವಣೆ ಆಯೋಗ ಹೆಸರು ಸೇರ್ಪಡೆ, ಮತಗಟ್ಟೆ ಬದಲಾವಣೆ ಅವಕಾಶ ನೀಡಿದ್ದರೂ ಕೆಲವರು ಗಮನಿಸಿರುವುದಿಲ್ಲ. ಹೀಗಾಗಿ ಮತದಾರರು ಕೂಡಲೇ ತಮ್ಮ ಹೆಸರು ಮತಪಟ್ಟಿಯಲ್ಲಿ ಇದೆಯೇ? ಮತಗಟ್ಟೆ ಬದಲಾಗಿದೆಯೇ? ಎಂಬುದನ್ನು ಪರಿಶೀಲಿಸಿಕೊಂಡು ಸರಿಪಡಿಕೊಂಡು ಮತ ಚಲಾಯಿಸಬಹುದು.