

ಚನ್ನರಾಯಪಟ್ಟಣ: ಶಾಲಾ ಹಂತದಿಂದಲೇ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಳಕ್ಕೆ ಸಹಕಾರಿಯಾಗಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಯುಕ್ತಾಶ್ರಯದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 2023-24ನೇ ಸಾಲಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಹಂತದಲ್ಲಿ ಮಕ್ಕಳಲ್ಲಿ ಇರುವ ಕ್ರೀಡಾ ಪ್ರತಿಭೆ ಗುರುತಿಸಿ ಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ದೈಹಿಕ ಶಿಕ್ಷಣ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಕ್ರೀಡೆಗಳು ಕೇವಲ ಸೋಲು-ಗೆಲುವಿನ ಲೆಕ್ಕಾಚಾರವಲ್ಲ, ಉತ್ತಮ ಆರೋಗ್ಯ ಕಲ್ಪಿಸುವ ರಹದಾರಿ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್.ಮಂಜುನಾಥ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜಣ್ಣ ತಂಡಗಳ ಪರಿಚಯ ಮಾಡಿಕೊಂಡರು. ಕಸಬಾ ಹೋಬಳಿ ಶಿಕ್ಷಣ ಸಂಯೋಜಕ ಸಿ.ಎಂ.ಶಿವಣ್ಣ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕುಸುಮ ಪ್ರಮಾಣವಚನ ಬೋಧಿಸಿದರು.
ಬಿಆರ್‌ಸಿ ಕೆ.ಎನ್.ಅನಿಲ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ್, ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿಗಳಾದ ಕೆ.ಎ. ಪ್ರಕಾಶ್, ಬಿ.ಆನಂದ್ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ವಿ.ಜಿ.ದ್ಯಾವೇಗೌಡ, ಚಿಕ್ಕೇಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಟಿ. ನಾಗರಾಜು, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ವಿ.ಕಾಳೇಗೌಡ, ಪದಾಧಿಕಾರಿಗಳಾದ ಎ.ಮಂಜುಳಾ, ಸಿ.ಎಂ.ಶಿವಸ್ವಾಮಿ, ಟಿ.ಎಸ್.ಸಣ್ಣಸ್ವಾಮಿ, ಕೆ.ಬಿ.ನಂಜೇಗೌಡ, ಬಿ.ಎನ್.ಚಿಕ್ಕೇಗೌಡ ಇತರರು ಇದ್ದರು.