

ಬಳ್ಳಾರಿ : ಪುಸ್ತಕಗಳು ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತವೆ. ನಮ್ಮ ಒಂಟಿತನವನ್ನು ನೀಗಿಸುವುದರೊಂದಿಗೆ ಸಂತೋಷ ಮತ್ತು ನೆಮ್ಮದಿಯನ್ನು ಕೊಡುತ್ತವೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ಬಿ.ಕೆ ಲಕ್ಷ್ಮೀ ಕಿರಣ್ ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಗ್ರಂಥಾಲಯ ವಿಭಾಗದ ವತಿಯಿಂದ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಪುಸ್ತಕಗಳ ಜೊತೆಗೆ ಒಡನಾಟವನ್ನು ಇಟ್ಟುಕೊಂಡು ಉತ್ತಮವಾದ ಜ್ಞಾನವನ್ನು ಪಡೆದುಕೊಳ್ಳಬೇಕು . ಆ ಮೂಲಕ ಆದರ್ಶಯುತವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕ ಡಾ.ಕೆ.ಎಸ್.ಶಿವಪ್ರಕಾಶ್ ಮಾತನಾಡಿ, ಗ್ರಂಥಾಲಯವು ಜ್ಞಾನವನ್ನು ಹಂಚುವ ಅತ್ಯುತ್ತಮ ಕೇಂದ್ರವಾಗಿದೆ. ಅದು ಜ್ಞಾನ, ಶಿಕ್ಷಣ ಮತ್ತು ಮಾಹಿತಿಯನ್ನು ದಾಟಿಸುವುದರೊಂದಿಗೆ ಜನರ ವಿಶ್ವವಿದ್ಯಾಲಯವಾಗಿ ಕೂಡ ಅರ್ಥಪೂರ್ಣವಾದ ಕೆಲಸ ನಿರ್ವಹಿಸುತ್ತದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ಓದು ನಮ್ಮಲ್ಲಿ ಹೊಸ ಆಲೋಚನಾಕ್ರಮ, ಸಾಮಾಜಿಕ ತಿಳಿವಳಿಕೆ ಮತ್ತು ನೈತಿಕ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಚ್.ಕೆ.ಮಂಜುನಾಥರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಓದಿನ ಅಭಿರುಚಿಯನ್ನು ಬೆಳೆಸಿಕೊಂಡು ಸಾಗಬೇಕೆಂದರು.
ಹಿರಿಯ ಅಧ್ಯಾಪಕ ಡಾ.ಸೋಮನಾಥ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ, ಗ್ರಂಥಪಾಲಕ ಕೆ.ಪ್ರಶಾಂತ್, ಅತಿಥಿ ಗ್ರಂಥಪಾಲಕ ಕೆ.ಗೋಡ್ಲಪ್ಪ, ಸಹಾಯಕ ಪ್ರಾಧ್ಯಾಪಕ ಕೆ.ಬಸಪ್ಪ ಉಪಸ್ಥಿತರಿದ್ದರು.