ಕಾಲಕ್ಕೆ ತಕ್ಕಂತೆ ಜ್ಞಾನ, ಕೌಶಲ ವೃದ್ಧಿಸಿಕೊಳ್ಳಿ

d6da3de1-5fd8-422e-9733-bab8526b4324
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವೃತ್ತಿ ಜೀವನ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ತಂತ್ರಜ್ಞಾನವನ್ನು ಮಾರ್ಗದರ್ಶಕವಾಗಿ ಸ್ವೀಕರಿಸಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪ ಕುಲಪತಿ ಡಾ. ಎಸ್​. ವಿದ್ಯಾಶಂಕರ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್​ ತಂತ್ರಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಬದಲಾವಣೆ ದಿನಗಳಲ್ಲಿ ಇಂಜಿನಿಯರ್ಸ್​ಗಳು ತಮ್ಮ ಜ್ಞಾನ ಹಾಗೂ ಕೌಶಲಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಿದೆ. ನಿರಂತರ ಕಲಿಕೆಯಿಂದ ಜ್ಞಾನ ವೃದ್ಧಿಯಾಗಲಿದೆ ಎಂದರು.
ಎಸ್​ಡಿಎಂಇ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ ಮಾತನಾಡಿ, ಎಎಸ್​ಡಿಎಂಇ ಸೊಸೈಟಿ 45 ವರ್ಷಗಳಿಂದ ಅತ್ಯುತ್ತಮ ತಾಂತ್ರಿಕ ಕುಶಾಗ್ರಮತಿ ಮತ್ತು ಉತ್ತಮ ಮೌಲ್ಯಗಳೊಂದಿಗೆ ಇಂಜಿನಿಯರ್ಸ್​ಗಳನ್ನು ತಯಾರು ಮಾಡುವಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಕಾಲೇಜಿನ ಹಿಂದಿನ ಪ್ರಾಂಶುಪಾಲರ ಸೇವೆ ಸ್ಮರಿಸಿದ ಅವರು, ಕಾಲೇಜಿನ ಅಭಿವೃದ್ಧಿಯಲ್ಲಿ ಎಲ್ಲ ಅಧ್ಯಾಪಕರ ಸೇವೆ ಸ್ಮರಣೀಯ ಎಂದರು.
ಕಾಲೇಜಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಇಲೆಕ್ಟ್ರಾನಿಕ್ಸ್​ ಮತ್ತು ಕಮ್ಯುನಿಕೇಷನ್​ ವಿಭಾಗದ ಲತಾ ಶ್ರೀಪಾದ ನಾಯಕ ಅವರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಇದಲ್ಲದೆ 7 ವಿಭಾಗಗಳಲ್ಲಿ ಹೆಚ್ಚು ಅಂಕಗಳಿಸಿದ ತಲಾ ಮೂವರು ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಲಾಯಿತು. 696 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಶೈಕ್ಷಣಿಕ ಡೀನ್​ ಡಾ. ವಿಜಯಾ ಸಿ. ಪ್ರಮಾಣವಚನ ಬೋಧಿಸಿದರು. ಎಸ್​ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ಆಡಳಿತ ಮಂಡಳಿ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು, ಡೀನ್​ಗಳು, ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಇತರರು ಇದ್ದರು.
ಪ್ರಾಂಶುಪಾಲ ಡಾ.ರಮೇಶ ಚಕ್ರಸಾಲಿ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೊ. ವಿ.ಕೆ. ಪರ್ವತಿ ಮತ್ತು ಪ್ರೊ. ಇಂದಿರಾ ಉರ್ಮಜಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net