

ಯಲ್ಲಾಪುರ: ತಾಲೂಕಿನಲ್ಲಿ ಅರಬೈಲ್ ಜಲಪಾತದಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಿ, ನೀರಿನಲ್ಲಿ ಸಿಲುಕಿದ ಪ್ರವಾಸಿಗರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಎರಡು ದಿನಗಳ ನಂತರ ಜಲಪಾತದಲ್ಲಿ ನೀರಿನ ಪ್ರಮಾಣ ಒಮ್ಮೆಲೇ ಹೆಚ್ಚಾದ, ಪ್ರವಾಸಿಗರು ಸಿಲುಕಿ ಪರದಾಡಿದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರಬೈಲ್, ಗುಳ್ಳಾಪುರ ಭಾಗದಲ್ಲಿ ಭಾನುವಾರ ಮಳೆ ಅಷ್ಟಾಗಿ ಇರಲಿಲ್ಲ. ಆದರೆ, ಬೀರಗದ್ದೆ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಜಲಪಾತದಲ್ಲಿ ನೀರು ಹೆಚ್ಚಾಗಲು ಕಾರಣವಾಗಿದೆ. ಹುಬ್ಬಳ್ಳಿ ಭಾಗದಿಂದ ಪ್ರವಾಸಿಗರ ತಂಡವೊಂದು ಜಲಪಾತದ ನೀರಿಗಿಳಿದಿದ್ದು, ಆ ವೇಳೆ ನೀರಿನ ಪ್ರಮಾಣ ಒಮ್ಮೇಲೆ ಹೆಚ್ಚಾಗಿದೆ.
ನೀರಿನ ರಭಸಕ್ಕೆ ಸಿಲುಕಿದ ಮೂವರು ಪ್ರವಾಸಿಗರು ಪರದಾಡುತ್ತಿದ್ದರು. ಸೇರಿದ್ದ ಪ್ರವಾಸಿಗರು, ಸ್ಥಳೀಯರು ಸೇರಿ ಮೂವರನ್ನು ಅಪಾಯದಿಂದ ರಕ್ಷಿಸಿದ್ದಾರೆ. ನೀರಿಗಿಳಿಯುವ ಸಂದರ್ಭದಲ್ಲಿ ಪ್ರವಾಸಿಗರು ತೆಗೆದಿರಿಸಿದ್ದ ಬಟ್ಟೆ, ಬ್ಯಾಗ್ಗಳೆಲ್ಲ ಕೊಚ್ಚಿಕೊಂಡು ಹೋಗಿವೆ.