

ಲಿಂಗದಹಳ್ಳಿ: ಉಡೇವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆ ನೀರು ವ್ಯರ್ಥವಾಗದೇ ಭೂಮಿಯಲ್ಲಿ ಅಂತರ್ ಜಲಮಟ್ಟ ಹೆಚ್ಚಾಗಿ ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಉಡೇವಾ ಗ್ರಾಮದಲ್ಲಿ ಎಸ್‌ಇಪಿ ಹಾಗೂ ಟಿಎಸ್‌ಪಿ ಮತ್ತು ಸಾಮಾನ್ಯ ವರ್ಗದ ಯೋಜನೆಯ 30 ಲಕ್ಷ ರೂ.ಗಳ ಅನುದಾನದಲ್ಲಿ ಕೈಗೊಂಡಿರುವ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ, ಉಡೇವಾದಲ್ಲಿ 3.80 ಕೋಟಿ ರೂ. ವೆಚ್ಚದಲ್ಲಿ ನೀರು ಮರುಪೂರಣ ಯೋಜನೆ ಜಾರಿಗೊಳಿಸಲಾಗಿದೆ. ಸದ್ಯ ನಡೆಯುತ್ತಿರುವ ಸಿಸಿ ಕಾಮಗಾರಿ ಪೂರ್ಣಗೊಂಡರೆ ಇಡೀ ಗ್ರಾಮದ ರಸ್ತೆಗಳು ಸಿಸಿ ರಸ್ತೆಗಳಾಗಲಿವೆ ಎಂದು ತಿಳಿಸಿದರು.
ತರೀಕೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ 10,200 ಮನೆಗಳಿಗೆ ಇ-ಸ್ವತ್ತು ಇಲ್ಲದ ಕಾರಣ ಲಾನುಭವಿಗಳ ತಂದೆ-ತಾಯಿ ಹೆಸರಿನಲ್ಲಿದ್ದ ಮನೆ ಮತ್ತು ಖಾಲಿ ನಿವೇಶನಗಳ ವರ್ಗಾಣೆಗೆ, ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುತ್ತಿರಲಿಲ್ಲ. ಇದರಿಂದ ಹೊಸ ಮನೆಗಳ ನಿರ್ಮಾಣಕ್ಕೆ ತೊಂದರೆಯಾಗುತ್ತಿತ್ತು. ಕಂದಾಯ ಗ್ರಾಮ, ಉಪ ಕಂದಾಯ ಗ್ರಾಮಗಳನ್ನು ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪನೆ ಮಾಡಿದ್ದರಿಂದ ರಾಜ್ಯದ ಲಕ್ಷಾಂತರ ಮಂದಿಗೆ ಇ-ಖಾತಾ ದೊರೆಯಲಿದೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್, ಪಪಂ ಮಾಜಿ ಅಧ್ಯಕ್ಷೆ ಲತಾ ತಮ್ಮಯ್ಯ, ಗ್ರಾಪಂ ಸದಸ್ಯರಾದ ಡಿ.ಶ್ರೀನಿವಾಸ್, ಜ್ಞಾನಮೂರ್ತಿ, ತಾಪಂ ಮಾಜಿ ಸದಸ್ಯ ಎಸ್.ಎ.ಕೃಷ್ಣಪ್ಪ, ಶ್ರೀರಾಜಕುಮಾರ್, ಈಶ್ವರಪ್ಪ, ಸಿದ್ದಪ್ಪ, ತಿಮ್ಮಯ್ಯ, ಭೂ ಸೇನಾ ನಿಗಮದ ಇಂಜಿನಿಯರ್ ಪುನೀತ್, ಪಿಡಿಒ ಬಿ.ಮಂಜು ಇದ್ದರು.