

- ಭರತ್ ಶೆಟ್ಟಿಗಾರ್ ಮಂಗಳೂರು
ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ವಾಹನ ಮಾರಾಟ ಮತ್ತೆ ಚುರುಕು ಪಡೆಯುತ್ತಿದೆ. ಕಳೆದ ಎರಡು ತಿಂಗಳಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಾರು, ದ್ವಿಚಕ್ರ ವಾಹನಗಳ ಮಾರಾಟವಾಗಿದೆ.
ಅನ್‌ಲಾಕ್‌ನಲ್ಲಿ ಜನಜೀವನ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿದ್ದು, ಆರ್ಥಿಕ ಸ್ಥಿತಿಯೂ ಸುಧಾರಿಸುತ್ತಿದೆ. ಆದರೆ ಬಸ್ಸು, ಆಟೋ, ಟ್ಯಾಕ್ಸಿಗಳಲ್ಲಿ ಸಂಚರಿಸುವ ಕುರಿತು ಜನರ ಭಯ ದೂರವಾಗಿಲ್ಲ. ಆದ್ದರಿಂದ ಸ್ವಂತ ವಾಹನ ಹೊಂದಲು ಹೆಚ್ಚಿನವರು ಆಸಕ್ತರಾಗಿದ್ದಾರೆ. ಈ ನಡುವೆ, ಸರ್ಕಾರವೂ ವಾಹನ/ಮನೆ ಸಾಲಗಳಿಗೆ ಬಡ್ಡಿ ದರ ಕಡಿಮೆ ಮಾಡುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಈ ಎಲ್ಲ ಕಾರಣಗಳಿಂದಾಗಿ ಹಿಂದೆ ವಾಹನ ಖರೀದಿಸಲು ಇಚ್ಛಿಸಿದವರು, ಕರೊನಾ ಹಿನ್ನೆಲೆಯಲ್ಲಿ ತಮ್ಮ ಯೋಜನೆ ಮುಂದೂಡಿಕೆ ಮಾಡಿದವರು, ಅನ್‌ಲಾಕ್-4/5ರ ಬಳಿಕ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ.
ಸೆಪ್ಟೆಂಬರ್ ತಿಂಗಳಿಂದ ಶೋರೂಂಗಳಲ್ಲಿ ವಾಹನಗಳ ವಿಚಾರಣೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅಕ್ಷಯ ತೃತೀಯಾ ಅವಧಿಯಲ್ಲಿ ಲಾಕ್‌ಡೌನ್ ಇದ್ದ ಕಾರಣ ವಾಹನ ಖರೀದಿ ಸಾಧ್ಯವಾಗಿಲ್ಲ. ಆದ್ದರಿಂದ ನವರಾತ್ರಿ ಅವಧಿಯಲ್ಲಿ ಅತೀ ಹೆಚ್ಚಿನ ಮಾರಾಟ-ವಹಿವಾಟು ನಡೆದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.15-20ರಷ್ಟು ಏರಿಕೆ ಕಂಡುಬಂದಿದೆ ಎನ್ನುತ್ತಾರೆ ಮಂಗಳೂರು, ಉಡುಪಿಯ ವಿವಿಧ ವಾಹನ ಮಾರಾಟ ಮಳಿಗೆಗಳ ಮುಖ್ಯಸ್ಥರು.
ದ್ವಿಚಕ್ರ ವಾಹನಕ್ಕೆ ಬೇಡಿಕೆ ಹೆಚ್ಚಳ: ಕೋವಿಡ್ ಬಳಿಕ ಸ್ವಂತ ವಾಹನ ಬಳಕೆ ಮಾಡುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಾರು ಬಳಸುತ್ತಿದ್ದವರೂ ಖರ್ಚಿನ ಲೆಕ್ಕಾಚಾರದಲ್ಲಿ ದ್ವಿಚಕ್ರವಾಹನ ಖರೀದಿಸುತ್ತಿದ್ದಾರೆ. ಶೇ.20-25ರಷ್ಟು ಬೇಡಿಕೆ ಹೆಚ್ಚಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಧಿಕ ಸಂಖ್ಯೆಯ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಆದರೆ ಅಕ್ಟೋಬರ್ ತಿಂಗಳಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೆ ಸರಾಸರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ಕೋವಿಡ್ ಬಳಿಕ ದ್ವಿಚಕ್ರ ವಾಹನಗಳ ಮಾರಾಟ ಹಿಂದಿಗಿಂತ ಹೆಚ್ಚಾಗಿದೆ ಎನ್ನುತ್ತಾರೆ ಚಿಲಿಂಬಿಯಲ್ಲಿರುವ ದ್ವಿಚಕ್ರ ವಾಹನ ಮಾರಾಟ ಸಂಸ್ಥೆ ಪೈ ಸೇಲ್ಸ್‌ನ ಜನರಲ್ ಮ್ಯಾನೇಜರ್(ಸೇಲ್ಸ್) ಉಮೇಶ್ ಭಟ್.
ಐಷಾರಾಮಿ ಕಾರಿಗಿಲ್ಲ ಬೇಡಿಕೆ: ಮಧ್ಯಮ ವರ್ಗದವರೂ ಖರೀದಿಸಲು ಸಾಧ್ಯವಾಗುವ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಐಷಾರಾಮಿ ಕಾರುಗಳಿಗೆ ಬೇಡಿಕೆ ಕುಸಿದಿದೆ. ಕರೊನಾ ಬಳಿಕ ಬೆರಳೆಣಿಕೆ ಸಂಖ್ಯೆಯ ಕಾರುಗಳಷ್ಟೇ ಮಾರಾಟವಾಗಿವೆ. ಇನ್ನು ಜನವರಿ ಬಳಿಕವಷ್ಟೇ ಕಾರಿಗೆ ಬೇಡಿಕೆ ಬರಬಹುದು ಎನ್ನುತ್ತಾರೆ ಮಂಗಳೂರಿನ ಕಾರು ಮಾರಾಟ ಸಂಸ್ಥೆಯೊಂದರ ಪ್ರಬಂಧಕ.
ಉಡುಪಿಯಲ್ಲಿ ಶೇ.15ರಷ್ಟು ವೃದ್ಧಿ: ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ ದ್ವಿಚಕ್ರ ವಾಹನ ಮಾರಾಟ ಮತ್ತು ನೋಂದಣಿಯಲ್ಲಿ ಶೇ.14.70 ಹಾಗೂ ಕಾರು ಖರೀದಿ ಪ್ರಮಾಣ ಶೇ.39ರಷ್ಟು ಏರಿಕೆಯಾಗಿದೆ. ಲಾಕ್‌ಡೌನ್ ಮುನ್ನ 1,731 ದ್ವಿಚಕ್ರ ವಾಹನ ಮತ್ತು 506 ಕಾರುಗಳ ನೋಂದಣಿಯಾಗಿತ್ತು. ಜೂನ್‌ನಿಂದ ಮಾರಾಟ ಪ್ರಮಾಣ ವೃದ್ಧಿಸಿದ್ದು, ಆಗಸ್ಟ್‌ನಲ್ಲಿ 1516 ಬೈಕ್, 484 ಕಾರು, ಸೆಪ್ಟೆಂಬರ್‌ನಲ್ಲಿ 1412 ಬೈಕ್ ಮತ್ತು 588 ಕಾರುಗಳನ್ನು ನೋಂದಾಯಿಸಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 1289 ಬೈಕ್ ಮತ್ತು 556 ಕಾರು, ಸೆಪ್ಟೆಂಬರ್‌ನಲ್ಲಿ 1230 ಬೈಕ್ ಮತ್ತು 421 ಕಾರುಗಳ ಖರೀದಿ ನಡೆದಿತ್ತು.
ಕೋವಿಡ್ ಬಳಿಕ ಕಾರುಗಳ ಮಾರಾಟದಲ್ಲಿ ಕಳೆದೆರಡು ತಿಂಗಳಿಂದ ಏರಿಕೆಯಾಗುತ್ತಿದೆ. ಲಾಕ್‌ಡೌನ್ ಪೂರ್ವದ ಸ್ಥಿತಿಗೆ ಮತ್ತೆ ವಹಿವಾಟು ತಲುಪುತ್ತಿದೆ. ಸರ್ಕಾರವೂ ಬಡ್ಡಿ ದರದಲ್ಲಿ ಕೆಲ ನಿಯಮಾವಳಿಗಳ ಸಡಿಲಿಕೆ ಮಾಡಿರುವುದು ಇದಕ್ಕೆ ಕಾರಣ ಎನ್ನಬಹುದು.
-ಶಶಿಧರ ಕಾರಂತ್, ಡಿಜಿಎಂ (ಸೇಲ್ಸ್), ಮಾಂಡೋವಿ ಮೋಟರ್ಸ್
ಲಾಕ್‌ಡೌನ್‌ಗೆ ಮೊದಲು ಪ್ರತಿನಿತ್ಯ 100ರಿಂದ 120 ವಾಹನಗಳು ನೋಂದಣಿಯಾಗುತ್ತಿದ್ದವು. ಪ್ರಸ್ತುತ ನಿಧಾನವಾಗಿ ಹಿಂದಿನ ಸ್ಥಿತಿಗೆ ಮರಳುತ್ತಿದ್ದೇವೆ. ದ್ವಿಚಕ್ರ ವಾಹನಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗುತ್ತಿವೆ. ಕಾರುಗಳು ನಂತರದ ಸ್ಥಾನದಲ್ಲಿವೆ.
-ಆರ್.ಎಂ.ವರ್ಣೇಕರ್, ಆರ್‌ಟಿಒ, ಮಂಗಳೂರು