ಮೈಸೂರು: ಇಡೀ ದೇಶವನ್ನೇ ನಿರುದ್ಯೋಗ, ಭ್ರಷ್ಟಾಚಾರ, ಬಡತನಕ್ಕೆ ತಳ್ಳಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಸಂಚಾಲಕ ಮಾಜಿ ಮೇಯರ್ ಪುರುಷೋತ್ತಮ ಟೀಕಿಸಿದರು.
ಸಂವಿಧಾನ ಜಾರಿಯಾಗಿ ಆಡಳಿತ ಆರಂಭವಾದ ಬಳಿಕ ಇಡೀ ದೇಶದಲ್ಲಿ ಈಗ ನಿರುದ್ಯೋಗ, ಭ್ರಷ್ಟಾಚಾರ, ಬಡತನ ಹೆಚ್ಚಾಗಿದೆ. ದೇಶವನ್ನು ಇಂತಹ ದುರಂತಕ್ಕೆ ತಳ್ಳಿದ ಕೀರ್ತಿ ನರೇಂದ್ರ ಮೋದಿ ಅವರದ್ದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದಲಿತ ಸಮುದಾಯಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಚುನಾವಣೆ ವೇಳೆ ಮಹತ್ವದ ಪಾತ್ರ ವಹಿಸಲಿದ್ದಾರೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಯುವ ಜನಾಂಗ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಕೋರಿದರು.
ಲೇಖಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ದೇಶದಲ್ಲಿ ದಲಿತರು, ಹಿಂದುಳಿದವರು, ಬಡಜನತೆ ಸಂಕಷ್ಟದಲ್ಲಿದ್ದಾರೆ. ಇವರ ಜೀವನ ಸುಧಾರಣೆ ಆಗಬೇಕು ಎಂದರೆ ಎಚ್ಚರಿಕೆಯಿಂದ ಮತ ನೀಡಬೇಕಾದ ಅಗತ್ಯವಿದೆ. ಕಾಂಗ್ರೆಸ್ ಗ್ಯಾರಂಟಿಯಿಂದ ಎಷ್ಟೋ ಬಡಜನರಿಗೆ ಅನುಕೂಲವಾಗಿದೆ. ಹೀಗಾಗಿ ಇಡೀ ದೇಶಾದ್ಯಂತ ಇದೇ ರೀತಿಯ ಗ್ಯಾರಂಟಿ ಜಾರಿಗೊಳಿಸಲು ಹೊರಟಿರುವುದು ಸ್ವಾಗತಾರ್ಹ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರಗುರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವರ್ಣರಂಜಿತರಾಗಿರಬಹುದು. ಆದರೆ ಅವರ ಆಡಳಿತದಲ್ಲಿ ದೇಶದ ಜನತೆ ಸುಖದಿಂದ ಇದ್ದಾರೆಯೇ ಎಂಬುದು ಮುಖ್ಯವಾಗಿದೆ. ಭಾರತ ಈಗ ಪ್ರಕಾಶಿಸುತ್ತಿಲ್ಲ, ಬದಲಾಗಿ ನಲುಗುತ್ತಿದೆ. ಹೀಗಾಗಿ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಕೋರಿದರು. ಮುಖಂಡರಾದ ಸಿದ್ದಸ್ವಾಮಿ, ಚಿಕ್ಕಂದಾನಿ ಇದ್ದರು.