

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಯ ರೇಷ್ಮೆ ಬೆಳೆಗಾರರ ಅನುಕೂಲಕ್ಕಾಗಿ ನಗರದ ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ 4 ವರ್ಷಗಳ ಹಿಂದೆ ಸ್ಥಾಪಿತವಾಗಿರುವ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಉತ್ತಮ ವ್ಯಾಪಾರ ವಹಿವಾಟು ನಡೆಸುತ್ತಿದೆ. ಆದರೀಗ ಸ್ಥಳಾವಕಾಶದ ಕೊರತೆ ಎದುರಾಗಿದೆ.
ಎಪಿಎಂಸಿಯ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಈ ಮಾರುಕಟ್ಟೆ ಸದ್ಯಕ್ಕೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ಇದಕ್ಕೊಂದು ಕಾಯಂ ಸೂರಿನ ಅಗತ್ಯವೂ ಇದೆ.
ಸ್ಥಳೀಯ ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ 2018-19ನೇ ಸಾಲಿನ ಬಜೆಟ್‌ನಲ್ಲಿ ನಗರದಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಾಪನೆ ಕುರಿತು ಘೋಷಿಸಲಾಗಿತ್ತು. ಅಂತೆಯೆ, 2019ರ ಫೆಬ್ರವರಿ 24ರಂದು ಈ ಮಾರುಕಟ್ಟೆ ಸ್ಥಾಪನೆಗೊಂಡು ಕಾರ್ಯಚಟುವಟಿಕೆ ನಡೆಸಿಕೊಂಡು ಬರುತ್ತಿದೆ. ಮಾರುಕಟ್ಟೆಯ ವ್ಯಾಪಾರವೂ ವಿಸ್ತಾರವಾಗಿ ಬೆಳೆಯುತ್ತಿದೆ. ನಿತ್ಯ ಸರಾಸರಿ 1.5 ಟನ್‌ನಿಂದ 2.5 ಟನ್ ಗೂಡಿನ ವಹಿವಾಟು ನಡೆಯುತ್ತಿದೆ.
ವರ್ಷದಿಂದ ವರ್ಷಕ್ಕೆ ರೇಷ್ಮೆಗೂಡಿನ ಮಾರಾಟ ಹೆಚ್ಚಾಗುತ್ತಿದೆ. ಆದರೆ ಸ್ಥಳಾವಕಾಶ ಮಾತ್ರ ಅಷ್ಟೇ ಇದೆ. ಇದುವೇ ವ್ಯಾಪಾರ ಚಟುವಟಿಕೆಗೆ ತೊಡಕಾಗಿದೆ.
ಸ್ಥಳಾವಕಾಶದ ಕೊರತೆ ನೀಗಿಸಲು ರೇಷ್ಮೆ ಇಲಾಖೆ ಪ್ರಯತ್ನಿಸುತ್ತಿದೆ. ಎಪಿಎಂಸಿ ಸಹ ಹೆಚ್ಚುವರಿ ಜಾಗ ಕೊಡಲು ಮುಂದಾಗಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದಿಂದ ಬರುವ ಆದೇಶಕ್ಕಾಗಿ ಸದ್ಯ ಎದುರು ನೋಡಲಾಗುತ್ತಿದೆ.
ಇದರೊಂದಿಗೆ, ಹಾಲಿ ಮಾರುಕಟ್ಟೆ ಜಾಗ ಖರೀದಿಗೆ ಪ್ರಯತ್ನಗಳು ನಡೆದಿವೆ. ಕರಾರಿನಂತೆ ಕಟ್ಟಡವನ್ನು ಎಪಿಎಂಸಿಯಿಂದ ಬಾಡಿಗೆ ಪಡೆಯಲಾಗಿದೆ. 11 ತಿಂಗಳಿಗೊಮ್ಮೆ ಬಾಡಿಗೆ ನವೀಕರಣ ಮಾಡಲಾಗುತ್ತಿದೆ. ಈ ಸ್ವತ್ತನ್ನು ರೇಷ್ಮೆ ಇಲಾಖೆ ಸ್ವಂತಕ್ಕೆ ಖರೀದಿಸಲು ಮುಂದಾಗಿದೆ. ಅದಕ್ಕಾಗಿ ಬೆಂಗಳೂರಿನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಕಚೇರಿಯೊಂದಿಗೆ ಪತ್ರವ್ಯವಹಾರ ನಡೆಸಲಾಗಿದೆ. ಆದರೆ ಇನ್ನೂ ತೀರ್ಮಾನ ಹೊರಬಿದ್ದಿಲ್ಲ.
ನಗರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣದ ಬೇಡಿಕೆ ಇನ್ನೂ ಈಡೇರಿಲ್ಲ. ತಾತ್ಕಾಲಿಕ ಜಾಗದ ಬದಲಿಗೆ ಕಾಯಂ ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಬೇಕು ಎಂಬ ಆಗ್ರಹ ರೇಷ್ಮೆ ಬೆಳೆಗಾರರದು. ಅದಕ್ಕಾಗಿ 2 ಎಕರೆ ಜಾಗದ ಅವಶ್ಯಕತೆ ಇದೆ. ಈ ಕುರಿತು ರಾಜ್ಯ ಸರ್ಕಾರ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕಿದೆ.
ರೇಷ್ಮೆ ಮಾರುಕಟ್ಟೆಯಿಂದ ಈ ಭಾಗದ ರೈತರಿಗೆ ಪ್ರಯೋಜನವಾಗಿದೆ. ಮೂಲಸೌಕರ್ಯದೊಂದಿಗೆ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ. ಹಿಂದೆ ಈ ಭಾಗದ ರೈತರು ರೇಷ್ಮೆಗೂಡನ್ನು ಮಾರಾಟ ಮಾಡಲು ರಾಮನಗರ, ಚನ್ನಪಟ್ಟಣ, ತಿ.ನರಸೀಪುರ, ಮಳವಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಿತ್ತು. ಸದ್ಯ ಬಂಡಿಪಾಳ್ಯದ ಮಾರುಕಟ್ಟೆ ಸೌಲಭ್ಯದಿಂದ ಆ ಸಮಸ್ಯೆ ತಪ್ಪಿದೆ. ರೇಷ್ಮೆಗೂಡಿನ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಸ್ಪರ್ಧಾತ್ಮಕ ಧಾರಣೆ ಒದಗಿಸುವ ಉದ್ದೇಶದಿಂದ ಇ-ಹರಾಜು ಪದ್ಧತಿ ಅನುಷ್ಠಾನಕ್ಕೆ ತರಲಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ದ್ವಿತಳಿ ರೇಷ್ಮೆಗೂಡು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಕಳೆದ 4 ವರ್ಷಗಳಿಂದ ಪ್ರಸ್ತಕ ಡಿಸೆಂಬರ್ ವರೆಗೆ 1,047.39 ಟನ್ ದ್ವಿತಳಿ ರೇಷ್ಮೆಗೂಡು ಮಾರಾಟವಾಗಿದೆ. ಇದರ ಮೌಲ್ಯ 30.34 ಕೋಟಿ ರೂ. ಆಗಿದೆ. ಇದು ಈ ಭಾಗದ ಬೆಳೆಗಾರರು ದ್ವಿತಳಿ ರೇಷ್ಮೆ ಉತ್ಪಾದನೆಗೆ ಹೆಚ್ಚಿನ ಒಲವು ತೋರಿಸುವುದಕ್ಕೆ ಸಾಕ್ಷಿ. ಮಿಶ್ರತಳಿ ರೇಷ್ಮೆ ಕುರಿತು ನಿರಾಸಕ್ತಿ ತೋರಿದ್ದಾರೆ. 15.85 ಕೋಟಿ ರೂ. ಮೌಲ್ಯದ 11.79 ಟನ್‌ನಷ್ಟು ಮಾತ್ರ ಮಿಶ್ರತಳಿ ರೇಷ್ಮೆಗೂಡು ಮಾರಾಟವಾಗಿದೆ. ಎರಡೂ ತಳಿಯ ಗೂಡನ್ನು 20,299 ಡೀಲರ್‌ಗಳು ಖರೀದಿ ಮಾಡಿದ್ದಾರೆ.
ವರ್ಷದಿಂದ ವರ್ಷಕ್ಕೆ ವಹಿವಾಟು ವೃದ್ಧಿಯಾಗಿದೆ. ಮಾರುಕಟ್ಟೆ ಆರಂಭವಾದ ವರ್ಷವಾದ 2018-19ರಲ್ಲಿ 21.15 ಟನ್, 2019-20ರಲ್ಲಿ 113.20 ಟನ್, 2020-21ರಲ್ಲಿ 144.30 ಟನ್, 2021-22ರಲ್ಲಿ 156 ಟನ್, 2022-23ರಲ್ಲಿ 265.26 ಟನ್, 2023-24ರ ಸಾಲಿನ ಡಿಸೆಂಬರ್ ವರೆಗೆ 358.60 ಟನ್‌ನಷ್ಟು ರೇಷ್ಮೆಗೂಡನ್ನು ರೈತರಿಂದ ಖರೀದಿ ಮಾಡಲಾಗಿದೆ.
ವಹಿವಾಟು ಹೆಚ್ಚಾಗುತ್ತಿದ್ದಂತೆ ರೇಷ್ಮೆಗೂಡಿನ ಮಾರಾಟದ ಮೌಲ್ಯದಲ್ಲೂ ಏರಿಕೆಯಾಗಿದೆ. 2018-19ರಲ್ಲಿ 6.5 ಲಕ್ಷ ರೂ., 2019-20ರಲ್ಲಿ 3.57 ಕೋಟಿ ರೂ., 2020-21ರಲ್ಲಿ 3.80 ಕೋಟಿ ರೂ., 2021-22ರಲ್ಲಿ 6.75 ಕೋಟಿ ರೂ., 2022-23ರಲ್ಲಿ 15.53 ಕೋಟಿ ರೂ., 2023ರ ಡಿಸೆಂಬರ್‌ವರೆಗೆ 15.86 ಕೋಟಿ ರೂ. ಮೌಲ್ಯದ ರೇಷ್ಮೆಗೂಡು ಮಾರಾಟವಾಗಿದೆ. ಒಟ್ಟು ಕಳೆದ 4 ವರ್ಷಗಳಲ್ಲಿ 46.20 ಕೋಟಿ ರೂ. ಮೌಲ್ಯದ 1059.19 ಟನ್ ರೇಷ್ಮೆ ಗೂಡು ಮಾರಾಟವಾಗಿದೆ.
ರೇಷ್ಮೆಗೂಡಿನ ಮಾರಾಟದ ಪ್ರಮಾಣ(ಟನ್‌ಗಳಲ್ಲಿ)
ವರ್ಷ ಪ್ರಮಾಣ
2018-19 21.156
2019-20 113.206
2020-21 144.301
2021-22 156.66
2022-23 265.26
2023(ಡಿಸೆಂಬರ್‌ವರೆಗೆ) 358.603
ಒಟ್ಟು 1059.19
ರೇಷ್ಮೆಗೂಡಿನ ಮೌಲ್ಯ(ಲಕ್ಷ ರೂ.ಗಳಲ್ಲಿ)
ವರ್ಷ ಮೊತ್ತ
2018-19 65.442
2019-20 357.958
2020-21 380.574
2021-22 675.824
2022-23 1553.758
2023-24(ಡಿಸೆಂಬರ್ ವರೆಗೆ) 1586.686
ಒಟ್ಟು 4620.24
ಬಂಡಿಪಾಳ್ಯದ ಎಪಿಎಂಸಿಯಲ್ಲಿರುವ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಬೆಳೆಗಾರರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಆದರೆ ಮಾರುಕಟ್ಟೆಗೆ ಸ್ಥಳಾವಕಾಶ ಕೊರತೆ ಎದುರಾಗಿದೆ. ಹೆಚ್ಚುವರಿ ಜಾಗಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಬರುವ ಸೂಚನೆ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.ಎಸ್.ಕೆ.ಮಂಜುಳಾ. ಉಪನಿರ್ದೇಶಕಿ, ರೇಷ್ಮೆ ಇಲಾಖೆ