

ಮಳವಳ್ಳಿ: ಮೌಢ್ಯತೆಗೆ ಮಾರು ಹೋಗಿ ಆಡಂಬರದಿಂದ ಮೃತಪಟ್ಟವರ ತಿಥಿ ಕಾರ್ಯಗಳ ಮಾಡಿ ಸಾಲಗಾರರಾಗುವ ಸಂಖ್ಯೆ ಹೆಚ್ಚಾಗುತ್ತಿದೆ. ಕುವೆಂಪು ನಾಡಿನಲ್ಲಿ ವೈಜ್ಞಾನಿಕತೆ ಬೆಳೆಯಬೇಕು. ಪ್ರಗತಿಪರ ವಿಚಾರಧಾರೆಗಳನ್ನ ಮುಂದಿಟ್ಟುಕೊಂಡು ಬ್ರಾಹ್ಮಣ್ಯದ ವಿರುದ್ಧ ನಾವು ಮುಂದಡಿ ಹಿಡಬೇಕೆಂದು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ತಿಳಿಸಿದರು.
ತಾಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ಅವರ ತಾಯಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿಯವರ ಅತ್ತೆ ಹನುಮಮ್ಮ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಕುವೆಂಪುರವರ ವಿಚಾರವನ್ನು ಮೈಗೂಡಿಸಿಕೊಂಡು ವಿವಾಹ ಅಥವಾ ತಿಥಿ ಕಾರ್ಯಗಳನ್ನ ಅನುಸರಿಸಬೇಕು ಎಂದ ಅವರು, ಮರಣ ಹೊಂದಿದ ನಂತರವೂ ಅವರನ್ನ ಸ್ಮರಿಸುವುದರ ಜತೆಗೆ ಬದುಕಿದ್ದಾಗ ಹಿರಿಯರನ್ನ ಗೌರವದಿಂದ ಕಾಣಬೇಕು. ಆರೈಕೆ ಮಾಡುವುದೇ ನಿಜವಾದ ಪ್ರೀತಿಯಾಗಿದೆ. ಉಳಿದಿದ್ದೆಲ್ಲವೂ ನಿಷ್ಟ್ರಯೋಜಕ ಎಂದು ತಿಳಿಸಿದರು.
ಸಮಾಜ ವಿಜ್ಞಾನಿ ಜಿ.ಎನ್.ನಾಗರಾಜ್ ಮಾತನಾಡಿ, ಹನುಮಮ್ಮ ಅವರು ತಮ್ಮ ಪುತ್ರ ಮತ್ತು ಸೊಸೆಯು ಜನಪರ ಚಳವಳಿಯಲ್ಲಿ ಕೆಲಸ ಮಾಡಲು ಬಹಳಷ್ಟು ಪ್ರೋತ್ಸಾಹವನ್ನು ನೀಡುವುದರ ಜತೆಗೆ ತಾವೇ ಸ್ವತಃ ಚಳವಳಿಯ ಭಾಗವಾಗಿ ಕೆಲಸ ಮಾಡುತ್ತಿದ್ದರು. ಅವರ ಮಾದರಿ ಜೀವನವನ್ನ ಉಳಿದವರು ಸಹ ಅಳವಡಿಸಿಕೊಂಡು ಅವರ ಹೆಸರಿನಲ್ಲಿ ನಡೆಯುತ್ತಿರುವ ಶ್ರದ್ಧಾಂಜಲಿ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಮಾದರಿಯ ಕೆಲಸವಾಗಿದ್ದು, ಹಳ್ಳಿಗಾಡಿನ ಜನ ಅನುಸರಿಸಬೇಕೆಂದು ವಿನಂತಿಸಿದರು.
ಪಂಚಾಯಿತಿ ಅಧ್ಯಕ್ಷ ಸಿದ್ದಯ್ಯ, ಲೇಖಕಿ ಡಾ.ವಸುಂದರಾ ಭೂಪತಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೆಂಪೇಗೌಡ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಲಿಂಗಮ್ಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.