ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಳ

air port jan 28 2020
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, 2019ರಲ್ಲಿ ಒಟ್ಟಾರೆ 3.30 ಕೋಟಿ ಜನರು ವಿಮಾನಯಾನವನ್ನು ಕೈಗೊಂಡಿದ್ದಾರೆ.

ದೇಶದ ಮೂರನೇ ಅತಿಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. 2019ರಲ್ಲಿ ಸ್ಥಳೀಯ ಪ್ರಯಾಣಿಕರಿಗಿಂತ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2018ರಲ್ಲಿ 2.8 ಕೋಟಿ ಸ್ಥಳೀಯ ಪ್ರಯಾಣಿಕರಿದ್ದರೆ, 2019ರಲ್ಲಿ 2.87 ಕೋಟಿ ಜನರು ಸಂಚರಿಸಿದ್ದಾರೆ. 2019ರಲ್ಲಿ ಸ್ಥಳೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 2.6 ಹೆಚ್ಚಳವಾದಂತಾಗಿದೆ.

2018ರಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 42.7 ಲಕ್ಷದಷ್ಟಿದ್ದರೆ, 2019ರಲ್ಲಿ ಶೇ.14 ಹೆಚ್ಚಳವಾಗಿದ್ದು, 48.7 ಲಕ್ಷ ಜನರು ವಿದೇಶ ಪ್ರಯಾಣ ಮಾಡಿದ್ದಾರೆ. ಒಟ್ಟಾರೆ ಇಡೀ ವರ್ಷ 3.30 ಕೋಟಿ ಜನರು ಪ್ರಯಾಣಿಸಿದ್ದಾರೆ. ಅದೇ 2018ರಲ್ಲಿ 3.23 ಕೋಟಿ ಜನರು ವಿಮಾನಯಾನ ಮಾಡಿದ್ದರು.

ವಿಮಾನ ಸಂಚಾರ ಇಳಿಕೆ: ಭಾರತೀಯ ವಿಮಾನಯಾನ ಉದ್ಯಮದಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದರಿಂದಾಗಿ, 2019ರಲ್ಲಿ ವಿಮಾನ ಸಂಚಾರದಲ್ಲಿ ಶೇ. 0.1 ಇಳಿಕೆಯಾಗಿದೆ. 2014ರಿಂದ 2018ರವರೆಗೆ ವಿಮಾನ ಸಂಚಾರ ಶೇಕಡಾವಾರು ಬೆಳವಣಿಗೆ ಎರಡಂಕಿ ದಾಟುತ್ತಿತ್ತು. ಆದರೆ, 2018ರಲ್ಲಿ ಒಟ್ಟಾರೆ 2,35,190 ವಿಮಾನ ಸಂಚಾರವಿದ್ದರೆ, 2019ರಲ್ಲಿ 2,35,058ಕ್ಕೆ ತಲುಪಿದೆ. ಆದರೆ, ಅಂತಾರಾಷ್ಟ್ರೀಯ ಸಂಚಾರದಲ್ಲಿ ಹೆಚ್ಚಳವಾಗಿದ್ದು, 2018ರಲ್ಲಿ 26,966 ಸಂಚಾರವಿತ್ತು. ಅದೇ 2019ರಲ್ಲಿ ಅಂತಾರಾಷ್ಟ್ರೀಯ ಸಂಚಾರದ ಪ್ರಮಾಣ ಶೇ. 13 ಏರಿಕೆಯಾಗಿ, 30,556 ವಿಮಾನ ಸಂಚಾರ ಮಾಡಿವೆ.

ವಿದೇಶದ ಇಪ್ಪತ್ತೈದು ನಗರಗಳಿಗೆ ಸೇವೆ

ಸದ್ಯ ಬೆಂಗಳೂರಿನಿಂದ ದೇಶದ 82 ನಗರಗಳಿಗೆ ಮತ್ತು ವಿದೇಶದ 25 ನಗರಗಳಿಗೆ ಸೇವೆ ನೀಡಲಾಗುತ್ತಿದೆ. 8 ಸ್ವದೇಶಿ, 4 ಭಾರತೀಯ ವಿಮಾನಯಾನ ಸಂಸ್ಥೆ ಸೇರಿ 36 ಪ್ರಯಾಣಿಕರ ವಿಮಾನ ಯಾನ ಸಂಸ್ಥೆಗಳು ಕೆಐಎನಿಂದ ಸೇವೆ ನೀಡುತ್ತಿವೆ. 2019ರಲ್ಲಿ ದೇಶದೊಳಗಿನ 7 ನಗರಗಳು ಮತ್ತು ವಿದೇಶದ 2 ನಗರಗಳಿಗೆ ಹೊಸದಾಗಿ ಹಾರಾಟ ಆರಂಭಿಸಲಾಗಿದೆ. ಅದೇ ರೀತಿ 2020ರ ಬೇಸಿಗೆ ಅಂತ್ಯದೊಳಗೆ ಟೋಕಿಯೋ ಮತ್ತು ಮ್ಯೂನಿಚ್​ಗೆ ವಿಮಾನಯಾನ ಸೇವೆ ಆರಂಭಿಸಲಾಗುತ್ತಿದೆ.

1,49,603 ಮೆಟ್ರಿಕ್ ಟನ್ ಸರಕು ಸಾಗಣೆ

ಸ್ವದೇಶಿ ಸರಕು ಸಾಗಣೆಯ ಪ್ರಮಾಣದಲ್ಲೂ ಹೆಚ್ಚಳವಾಗಿದೆ. 2019ರಲ್ಲಿ 1,49,603 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಲಾಗಿದೆ. ಅದೇ 2018ರಲ್ಲಿ 1,43,701 ಮೆಟ್ರಿಕ್ ಟನ್ ಸರಕನ್ನು ಸ್ವದೇಶದೊಳಗೆ ಸಾಗಣೆ ಮಾಡಲಾಗಿದೆ. ಆದರೆ, ಅಂತಾರಾಷ್ಟ್ರೀಯ ಸರಕ ಸಾಗಣೆಯಲ್ಲಿ ಶೇ. 4.1 ಇಳಿಕೆಯಾಗಿದೆ.

ದೆಹಲಿ, ಸಿಂಗಾಪುರಕ್ಕೆ ಅಧಿಕ

ವಿಮಾನನಿಲ್ದಾಣದಿಂದ ದೆಹಲಿ, ಅದಾದ ನಂತರ ಮುಂಬೈಗೆ ಅತಿಹೆಚ್ಚು ಜನರು ಪ್ರಯಾಣಿಸಿದ್ದಾರೆ. ಅದೇ ರೀತಿ ವಿದೇಶ ಪ್ರಯಾಣದಲ್ಲಿ ಸಿಂಗಾಪುರ ಮತ್ತು ದುಬೈಗೆ ಹೆಚ್ಚಿನ ಜನರು ಕೆಐಎನಿಂದ ವಿಮಾನಯಾನ ಮಾಡಿದ್ದಾರೆ.

ಕೆಐಎ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಮುಂದಿನ 5 ವರ್ಷಗಳಲ್ಲಿ ವಾರ್ಷಿಕ 5.5ರಿಂದ 6.5 ಕೋಟಿ ಪ್ರಯಾಣಿಕರನ್ನು ಹೊಂದುವ ಗುರಿಯಿದೆ. ಅದಕ್ಕಾಗಿ 2ನೇಟರ್ವಿುನಲ್ ನಿರ್ಮಾಣ ಸೇರಿ 13 ಸಾವಿರ ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 2019ರಲ್ಲಿ ವಿಮಾನನಿಲ್ದಾಣದಲ್ಲಿ ಅಳವಡಿಸಲಾದ ಹಲವು ವ್ಯವಸ್ಥೆಗಳಿಂದ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. | ಹರಿ ಮಾರರ್ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net