

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚಿದ್ದು, ಮುಂದಿನ 4-5 ದಿನಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ನಾಲ್ಕೈದು ಡಿಗ್ರಿ ಸೆ. ಏರಿಕೆಯಾಗಬಹುದು. ಇದೇ ವೇಳೆ ಕರಾವಳಿಯ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೋಮವಾರ (ಫೆ.24) ಸಾಧಾರಣ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೇಸಿಗೆ ಅಡಿಯಿಡುತ್ತಿರುವ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಕ್ರಮೇಣ ಏರುತ್ತಿದೆ. ಈ ವಾರಾಂತ್ಯದಿಂದಲೇ ನಾಲ್ಕೈದು ದಿನಗಳಲ್ಲಿ ಸಾಮಾನ್ಯಕ್ಕಿಂತ 3-5 ಡಿಗ್ರಿ ಉಷ್ಣಾಂಶ ಹೆಚ್ಚಳವಾಗಲಿದೆ. ಅದರಲ್ಲೂ ಉತ್ತರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ಏರಿಕೆಯಾಗಲಿದೆ. ಕರಾವಳಿಯಲ್ಲೂ ಬಿಸಿಲು ಹೆಚ್ಚಳವಾಗಲಿದ್ದು, ಸಾಮಾನ್ಯಕ್ಕಿಂತ 2-3 ಡಿ. ಸೆ. ಉಷ್ಣಾಂಶ ಏರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಉಷ್ಣಾಂಶ 33 ಡಿ. ಸೆ. ಆಸುಪಾಸಿನಲ್ಲಿ ಇರಲಿದ್ದು, ಸೋಮವಾರ ಕೆಲವೊಮ್ಮೆ ಮೋಡ ಮುಸುಕುವ ಸಾಧ್ಯತೆ ಇದೆ.
ಕಾದಿದೆ ಬಿಸಿಲ ಬೇಗೆ:
ಮಾರ್ಚ್ ಮೊದಲ ವಾರದಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಲಿದೆ. ಈಗಿನಕ್ಕಿಂತ 2-3 ಡಿ. ಸೆ. ಹೆಚ್ಚು ಉಷ್ಣಾಂಶ ಕಂಡುಬರಲಿದೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲೇ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಬಿಸಿಲು ಹೆಚ್ಚಾದಂತೆ ವಾತಾವರಣದಲ್ಲಿ ತುಸು ಬದಲಾವಣೆಯಾಗಿ ಸ್ವಲ್ಪಮಟ್ಟಿಗೆ ಮಳೆಯಾಗುವುದೆಂದು ನಿರೀಕ್ಷಿಸಲಾಗಿದೆ. ಆದರೆ, ಈ ಬದಲಾವಣೆ ಮಾರ್ಚ್ ಮೊದಲ ವಾರ ಕಳೆದ ನಂತರವೇ ಕಂಡುಬರಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.