ಪ್ರಯೋಜನಕ್ಕಿಲ್ಲದ ಸಹಾಯಧನ - ಬಿತ್ತನೆ ಬೀಜ ದರ ಹೆಚ್ಚಳವಾದರೂ ಪ್ರೋತ್ಸಾಹಧನಕ್ಕೆ ಯಥಾಸ್ಥಿತಿ - ತಪ್ಪುತ್ತಿಲ್ಲ ರೈತರ ಗೋಳು

PTR_27 MAY_1
Published on

ಕರಾವಳಿ ಜಿಲ್ಲೆಗಳಲ್ಲಿ ಭತ್ತ ಬೇಸಾಯವನ್ನು ಕಷ್ಟದಲ್ಲಿ ಮಾಡುತ್ತಿರುವ ರೈತರಿಗೆ ಪ್ರೋತ್ಸಾಹ ನೀಡಬೇಕಾದ ಸರ್ಕಾರ ಬಿತ್ತನೆ ಬೀಜದ ದರ ಹೆಚ್ಚಳ ಮಾಡುವ ಮೂಲಕ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಪ್ರತಿ ವರ್ಷ ಬಿತ್ತನೆ ಬೀಜದ ದರ ಹೆಚ್ಚಾಗುತ್ತಿದೆಯೇ ಹೊರತು, ಸಹಾಯಧನದ ಮೊತ್ತದಲ್ಲಿ ಏರಿಕೆ ಆಗದಿರುವುದು ಕೃಷಿಕರನ್ನು ಪರ್ಯಾಯ ಬೆಳೆಯತ್ತ ಮುಖಮಾಡುವಂತೆ ಮಾಡಿದೆ.


ರೈತ ಸಂಪರ್ಕ ಕೇಂದ್ರಗಳಿಗೆ ೨೦೨೪-೨೫ನೇ ಸಾಲಿನಲ್ಲಿ ಮೂರು ತಳಿಯ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗಿದೆ. ೨೫ ಕೆ.ಜಿ.ಬಿತ್ತನೆ ಜೀಜಕ್ಕೆ ಸಹ್ಯಾದ್ರಿ ಕೆಂಪು ಮುಕ್ತಿಗೆ ೧೩೮೭ ರೂ, ಜಯಕ್ಕೆ ೧೧೬೨ ರೂ, ಜ್ಯೋತಿಗೆ ೧೩೫೦ ರೂ. ನಿಗದಿ ಪಡಿಸಲಾಗಿದೆ. ೨೦೨೩-೨೪ನೇ ಸಾಲಿನಲ್ಲಿ ಎಂ.ಒ.೪ಗೆ ೧೧೪೩.೭೫ ರೂ, ಜ್ಯೋತಿ ೧೨೧೮.೭೫ ರೂ, ಜಯಕ್ಕೆ ೮೮೧.೨೫ ರೂ ಇತ್ತು.


ಸರ್ಕಾರದ ಸಹಾಯ ಧನ ಸಾಮಾನ್ಯ ವರ್ಗಕ್ಕೆ ೨೦೦ ರೂ.ಹಾಗೂ ಪರಿಶಿಷ್ಟ ಜಾತಿ-ವರ್ಗಕ್ಕೆ ೩೦೦ ರೂ.ನಿಗದಿಪಡಿಸಲಾಗಿದೆ. ೫ ವರ್ಷದ ಹಿಂದೆ ೨೦ರಿಂದ ೨೫ ರೂ.ಇದ್ದ ಬಿತ್ತನೆ ಬೀಜದ ದರ ಈಗ ೪೫ರಿಂದ ೫೫ ರೂ.ಗೆ ತಲುಪಿದೆ. ಸರ್ಕಾರ ನೀಡುವ ಸಹಾಯಧನದಲ್ಲಿ ವ್ಯತ್ಯಾಸವೇ ಆಗಿಲ್ಲ. ಈ ಮೂಲಕ ರೈತರ ಮೇಲೆ ಎಲ್ಲ ಸರ್ಕಾರಗಳೂ ದಬ್ಬಾಳಿಕೆ ಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಕಾರ್ಖಾನೆ, ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ವಶಕ್ಕೆ ಪಡೆದು ಒಕ್ಕಲೆಬ್ಬಿಸಲಾಗುತ್ತಿದೆ. ಇನ್ನೊಂದು ಕಡೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಎಲ್ಲೆಂದರಲ್ಲಿ ಸುರಿಯುವ ಮೂಲಕ ಭೂಮಿಯನ್ನೂ ಹಾಳು ಮಾಡಲಾಗುತ್ತಿದೆ. ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚವನ್ನು ಸಮದೂಗಿಸಲಾಗದ ರೈತರಿಗೆ ಇದೆಲ್ಲವೂ ಮಾರಕವಾಗಿದೆ.

ಯಂತ್ರಗಳೂ ದುಬಾರಿ
ಉಳುಮೆ ಯಂತ್ರಗಳನ್ನು ಪೂರೈಸುವ ಘಟಕಗಳನ್ನು ಸರ್ಕಾರದ ಸಹಕಾರದಲ್ಲಿ ಹೋಬಳಿ ಮಟ್ಟದಲ್ಲಿ ತೆರೆಯಲಾಗಿದೆ. ಆದರೂ, ಬಾಡಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಾರ್ಮಿಕರು ಸಿಗದಿರುವ ಕೃಷಿಕರಿಗೆ ಕೊಯ್ಲು ಯಂತ್ರಗಳೂ ವರ್ಷದಿಂದ ವರ್ಷಕ್ಕೆ ದರ ಹೆಚ್ಚಳ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಕರಾವಳಿ ಪ್ಯಾಕೇಜ್ ಇಲ್ಲ
ಭತ್ತ ಲಾಭದಾಯಕ ಬೆಳೆ ಅಲ್ಲ ಎಂಬ ಕಾರಣಕ್ಕೆ ರೈತರು ಬೇರೆ ಬೆಳೆಗಳತ್ತ ಆಸಕ್ತಿ ತೋರುತ್ತಿದ್ದಾರೆ. ಕರಾವಳಿ, ಮಲೆನಾಡು ಭಾಗದಲ್ಲಿ ಭತ್ತ ಬೆಳೆಯುವ ರೈತರು ಕಡಿಮೆಯಾಗುತ್ತಿದ್ದಾರೆ ಎಂಬುದನ್ನು ಗಮನಿಸಿದ ಸರ್ಕಾರ ೨೦೧೯ರಲ್ಲಿ ಕರಾವಳಿ ಪ್ಯಾಕೇಜ್ ಜಾರಿಗೊಳಿಸಿತ್ತು. ಈ ಮೂಲಕ ರೈತರಿಗೆ ಹೆಕ್ಟೇರ್‌ಗೆ ೭ ಸಾವಿರ ರೂ.ಸಹಾಯಧನ ಮೂಲಕ ಭತ್ತದ ಬೆಳೆಗೆ ಪ್ರೋತ್ಸಾಹ ನೀಡಲಾಗಿತ್ತು. ಬಳಿಕ ಬಂದ ಸರ್ಕಾರಗಳು ಇದನ್ನು ಮುಂದುವರಿಸಲಿಲ್ಲ.

ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಬಿತ್ತನೆ ಬೀಜದ ಬೆಲೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಸರ್ಕಾರದ ಸಹಾಯಧನದಲ್ಲಿ ವ್ಯತ್ಯಾಸವಾಗುತ್ತಿಲ್ಲ. ಅನ್ನದಾತನ ಗಾಯದ ಮೇಲೆ ಬರ ಎಳೆದಂತಾಗಿದೆ. ಸರ್ಕಾರ ತಕ್ಷಣ ಬಿತ್ತನೆ ಬೀಜದ ದರವನ್ನು ಕಡಿಮೆಗೊಳಿಸಬೇಕು.
| ಮನೋಹರ ಶೆಟ್ಟಿ ನಡಿಕಂಬಳಗುತ್ತು
ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net