

ಪಾಂಡವಪುರ: ತಾಲೂಕಿನಾದ್ಯಂತ ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಖಡಕ್ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ (ಕೆಡಿಬಿ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳ್ಳಿಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪರಿಣಾಮ 12 ವರ್ಷದ ಮಕ್ಕಳು ಕೂಡ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಆದ್ದರಿಂದ ಪೆಟ್ಟಿ ಅಂಗಡಿ ಮೇಲೆ ದಾಳಿ ನಡೆಸಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಈ ಸಂಬಂಧ ಕಳೆದ ಕೆಡಿಪಿ ಸಭೆಯಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಈಗಾಲಾದರೂ ಕ್ರಮವಹಿಸಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗೆ ಕಟ್ಟಾಜ್ಞೆ ಮಾಡಿದರು.
ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪದೇ ಪದೆ ದೂರುಗಳು ಕೇಳಿಬರುತ್ತಿವೆೆ. ಜಮೀನು ನೋಂದಣಿ ಸೇರಿದಂತೆ ಇನ್ನಿತರ ಕೆಲಸಗಳಿಗೆ ತಂತ್ರಾಂಶದಲ್ಲಿ ಅಳವಡಿಸುವಾಗ ಎಚ್ಚರಿಕೆ ವಹಿಸಬೇಕಿದೆ ಎಂದು ಸೂಚಿಸಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ತಹಸೀಲ್ದಾರ್ ಶ್ರೇಯಸ್, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾಡುವ ತಪ್ಪುಗಳಿಂದಾಗಿಯೇ ಕಂದಾಯ ಇಲಾಖೆಯಲ್ಲಿ ಹೆಚ್ಚು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಸಬ್ ರಿಜಿಸ್ಟ್ರಾರ್ ವೆಂಕಟೇಶ್ ಅವರಿಗೆ ಸೂಚಿಸಿದರು.
ಕೃಷಿ ಪ್ರಗತಿಗೆ ಪೂರಕವಾಗಿರುವ ಕೃಷಿ ವಿ.ವಿ.ಗಳ ಸಂಶೋಧನೆಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ಉಪಯೋಗಿಸಿಕೊಳ್ಳಬೇಕು ಎಂದು ಸೂಚಿಸಿದ ಶಾಸಕ ದರ್ಶನ್, ಪಟ್ಣಣದಲ್ಲಿ ಪ್ಲಾಸ್ಟಿಕ್ ಕವರ್ ಮತ್ತು ನೀರಿನ ಬಾಟಲಿಗಳು ಅಲ್ಲಲ್ಲಿ ಬಿದ್ದು ಅಶುಚಿತ್ವ ಉಂಟಾಗುತ್ತಿದೆ. ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೀಣಾ ಅವರಿಗೆ ತಾಕೀತು ಮಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಮಾತನಾಡಿ, ಪೌತಿ ಖಾತೆ ರದ್ದಾಗಿ ಜಮೀನಿನ ಹಕ್ಕು ಪಡೆದರೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ. ರೈತರು ಸಬ್ಸಿಡಿ ಸೌಲಭ್ಯ ಪಡೆದು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಪಶು ಸಂಗೋಪನಾ ಇಲಾಖೆಯ ಪ್ರಭಾರ ಸಹಾಯಕ ಡಾ.ಹಿಮಾಚಲ್ ಮಾತನಾಡಿ, ಕಾಲುಬಾಯಿಜ್ವರ ನಿವಾರಣೆಗಾಗಿ ಲಸಿಕೆ ಆಂದೋಲನ ನಡೆಸಿ ಮನೆಮನೆಗೆ ತೆರಳಿದರೂ ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಮಸ್ಯೆ ತೋಡಿಕೊಂಡರು.
ತಹಸೀಲ್ದಾರ್ ಜಿ.ಎಸ್.ಶ್ರೇಯಸ್ , ತಾಪ ಇಒ ಲೋಕೇಶ್‌ಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಇದ್ದರು.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಎಚ್‌ಎಲ್‌ಬಿಸಿ ಇಇ ಪುಟ್ಟಮಾಯಿಗೌಡ ಮಾತನಾಡಿ, ತೊಣ್ಣೂರು ಕೆರೆಯಿಂದ ಹಿರೋಡೆ ಕೆರೆವರೆಗಿನ ಕೋಡಿಹಳ್ಳ ಸುಧಾರಣೆಗೆ 35 ಕೋಟಿ ರೂ. ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಳೆ ಕಡಿಮೆಯಾಗಿರುವುದರಿಂದ 110 ಕೆರೆ ಪೈಕಿ 86 ಕೆರೆಗಳನ್ನು ತುಂಬಿಸಲಾಗಿದೆ ಎಂದು ತಿಳಿಸಿದರು. ನೀರಾವರಿ ಇಲಾಖೆಯ ಎಇಇ ಜಯರಾಮ್ ಮಾತನಾಡಿ, ರೈತರು ಸಣ್ಣ ಸಣ್ಣ ಕಾಲುವೆ ಮತ್ತು ಜಿಗುಳುಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಜಮೀನುಗಳಿಗೆ ನೀರೋದಗಿಸಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ದರ್ಶನ್, ಕೂಡಲೇ ಒತ್ತುವರಿ ತೆರವುಗೊಳಿಸಲು ಕ್ರಮವಹಿಸಬೇಕು ಎಂದು ತಾಲೂಕು ಸರ್ವೇಯರ್ ಭಾಸ್ಕರ್ ಅವರಿಗೆ ಸೂಚಿಸಿದರು. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕಿ ಎಸ್.ಪಿ.ಸೌಮ್ಯಾ ಮಾತನಾಡಿ, ರೈತರು ಹಂತ ಹಂತವಾಗಿ ತೋಟಗಾರಿಕೆ ಬೆಳೆಗಳತ್ತ ಗಮಹರಿಸುತ್ತಿದ್ದಾರೆ. ತರಕಾರಿ ಮತ್ತು ಹೂ ಬೆಳೆಗಳ ಜತೆಗೆ ತೆಂಗು ಮತ್ತು ಅಡಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ನಮ್ಮ ಪೂರ್ವಜರು ಬೆಳೆಯುತ್ತಿದ್ದ ಮಾದರಿಯ ಸಮಗ್ರ ಕೃಷಿ ಪದ್ಧ್ದತಿಯೇ ರೈತರಿಗೆ ಉಳಿದಿರುವ ಪರಿಹಾರ ಮಾರ್ಗವಾಗಿದೆ ಎಂದರು.
ಹೊರಗೆ ಕಳುಹಿಸದಿರಿ: ಪಟ್ಟಣದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ ನೋಂದಣಿಯಾಗುವ ಒಳರೋಗಿಗಳು ಮತ್ತು ಹೆರಿಗೆ ಪ್ರಕರಣಗಳನ್ನು ಹೊರಗಿನ ಆಸ್ಪತ್ರೆಗೆ ಕಳುಹಿಸಬಾರದು. ತುಂಬ ತುರ್ತು ಚಿಕಿತ್ಸೆಯಿದ್ದರೆ ಮಾತ್ರ ಈ ಕ್ರಮವಹಿಸಬೇಕು. ಖಾಸಗಿ ಲ್ಯಾಬ್‌ಗಳಿಗೆ ರೋಗಿಗಳನ್ನು ಕಳುಹಿಸದೆ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಇರುವ ಲ್ಯಾಬ್‌ಗಳಲ್ಲಿ ಪರೀಕ್ಷಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಅವರಿಗೆ ಸೂಚಿಸಿದ ಶಾಸಕರು, ತಾಲೂಕಿನಲ್ಲಿರುವ ಪಿಎಚ್‌ಸಿಗಳ ಜತೆಗೆ ಅವಶ್ಯವಿರುವ ಕಡೆ ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ನೀಲಗಿರಿಯಿಂದ ಅಂತರ್ಜಲ ಕುಸಿತ: ಪ್ರಾದೇಶಿಕ ಅರಣ್ಯಾಧಿಕಾರಿ ಜಗದೀಶ್‌ಗೌಡ ಮಾತನಾಡಿ, ಅರಣ್ಯ ವಲಯದಲ್ಲಿ ಹೆಚ್ಚು ಹೆಚ್ಚು ನೀಲಗಿರಿ ಬೆಳೆಯಲಾಗುತ್ತಿದೆ. ಇದರಿಂದ ಅಂತರ್ಜಲ ಕುಸಿತವಾಗುತ್ತಿದೆ. ಹಾಗಾಗಿ ಆದಾಯ ತಂದುಕೊಡಬಲ್ಲ ಹಲವು ಮರಗಳನ್ನು ಬೆಳೆಸಲು ಕಾರ್ಯಕ್ರಮ ರೂಪಿಸಲಾಗಿದೆ. ಚಂದ್ರೆ, ಚಿನಕುರಳಿ, ಕಣಿವೆಕೊಪ್ಪಲು ಸೇರಿದಂತೆ ಹಲವು ಭಾಗಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿರುವುದರಿಂದ ಚಿರತೆ ಸೆರೆಗೆ ಹೆಚ್ಚಿನ ಬೋನುಗಳು ಬೇಕಾಗಿರುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ದರ್ಶನ್, ಅರಣ್ಯ ಬೆಳೆಸಲು ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.