

ಶಿವಮೊಗ್ಗ: ರಾಜ್ಯ ಸರ್ಕಾರ ತುಷ್ಟೀಕರಣ ಆಡಳಿತ ನಡೆಸುತ್ತಿದೆ. ಒಂದು ಧರ್ಮದವರನ್ನು ಓಲೈಸುತ್ತ, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ದೂರಿದರು.
ವಸತಿ ಯೋಜನೆಯಲ್ಲಿ ಮುಸ್ಲಿಂರಿಗೆ ಶೇ.10ರ ಮೀಸಲಾತಿಯನ್ನು ಶೇ.15ಕ್ಕೆ ಏರಿಸಿರುವುದು ಸಂವಿಧಾನ ವಿರೋಧಿ. ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಅಂಬೇಡ್ಕರ್‌ಗೆ ಜೈಕಾರ ಹಾಕುತ್ತ, ಒಂದೇ ಜಾತಿ, ಧರ್ಮದವರನ್ನು ಓಲೈಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಸಂವಿಧಾನ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆಯಲ್ಲೂ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ. ಮುಸ್ಲಿಮರಿಗೆ ಮಾತ್ರ ವಸತಿ ಯೋಜನೆಯಲ್ಲಿ ಹೆಚ್ಚಳ ಮಾಡಿರುವುದು ಹಿಂದುಳಿದ, ದಲಿತ ವರ್ಗಕ್ಕೆ ಮಾಡಿದ ದ್ರೋಹ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಲ್ಲಿದ್ದ ದಲಿತರಿಗೆ ಸೇರಬೇಕಾದ ಹಣವನ್ನು ಬೇರೆ ಯೋಜನೆಗೆ ಬಳಕೆ ಮಾಡಲಾಗಿದೆ. ಜಾತಿಗಳ ನಡುವೆ ವಿಷಬೀಜ ಬಿತ್ತಿ ಹಿಂದು ಯುವಕರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಬಂಧಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ತಮ್ಮನ್ನು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ನೀಡಿದ ಸೌಲಭ್ಯಗಳ ಅಂಕಿ ಅಂಶ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದೆ. ಜುಲೈ 11 ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಅಲ್ಲೂ ನಾವು ಹೋರಾಟ ಮಾಡಲಿದ್ದೇವೆ ಎಂದರು.