

ಸುರೇಶ್ ಕೋಲ್ಕುಂಟೆ, ದಾವಣಗೆರೆ
ತರಕಾರಿ, ಆಹಾರಧಾನ್ಯ, ಸಾಂಬಾರ ಪದಾರ್ಥ, ಹಾಲು ಉತ್ಪನ್ನಗಳ ಬೆಲೆಗಳು ಗಗನಕ್ಕೇರಿದ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಬಿಸಿ ಗ್ರಾಹಕರಿಗೆ ತಗುಲಿದೆ.
ನಗರದ ಕೆಲವು ಹೋಟೆಲ್‌ಗಳಲ್ಲಿ ಈಗಾಗಲೇ ಕೆಲವೊಂದು ಆಹಾರದ ಬೆಲೆ ಹೆಚ್ಚಿಸಿದ್ದರೆ, ಇನ್ನೂ ಕೆಲವು ಹೋಟೆಲ್‌ಗಳು ದರ ಹೆಚ್ಚಿಸುವ ಚಿಂತನೆಯಲ್ಲಿವೆ.
ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಹೋಟೆಲ್ ಆಹಾರದ ಬೆಲೆ ಹೆಚ್ಚಿಸಲಾಗಿದೆ. ಹೊರ ಜಿಲ್ಲೆಗಳ ಜನರು ಮಹಾನಗರಕ್ಕೆ ನಿತ್ಯ ಬಂದು ಹೋಗುವುದರಿಂದ ದರ ಹೆಚ್ಚಳದ ಪರಿಣಾಮ ಬೀರದು. ಆದರೆ, ಮಧ್ಯಕರ್ನಾಟಕದ ಸ್ಥಿತಿಯೇ ಬೇರೆ. ಇಲ್ಲಿ ಪ್ರತಿದಿನ ಬರುವ ಕಾಯಂ ಗ್ರಾಹಕರನ್ನು ಹಿಡಿದಿಟ್ಟುಕೊಂಡು ಹೋಟೆಲ್ ನಡೆಸುವ ಸವಾಲು ಮಾಲೀಕರದ್ದು.
ನಗರದ ಕೆಲವು ಹೋಟೆಲ್‌ಗಳಲ್ಲಿ ಇಡ್ಲಿ, ವಡೆ ಬೆಲೆ ಪ್ಲೇಟ್‌ಗೆ 5 ರೂ. ಮತ್ತು ಕಾಫಿ-ಟೀ ದರ ಒಂದು ಕಪ್‌ಗೆ 3 ರೂ. ಹೆಚ್ಚಿಸಲಾಗಿದೆ. ಗ್ರಾಹಕರ ಅಭಿರುಚಿಯ ದೋಸೆ ದರ ಹೆಚ್ಚಿಸದೆ ಸೆಳೆಯಲಾಗುತ್ತಿದೆ. ಕೆಲವು ಹೋಟೆಲ್‌ಗಳಲ್ಲಿ ಇನ್ನೂ ಆಹಾರ ದರ ಹೆಚ್ಚಿಸಿಲ್ಲ.
ಹೋಟೆಲ್ ಉದ್ಯಮ ಎಂಬುದು ವ್ಯವಹಾರದ ಜತೆಗೆ ಒಂದು ಸೇವೆ ಇದ್ದಂತೆ. ಜನರಿಗೆ ಅನುಕೂಲ ಆಗುವ ರೀತಿ ಆಹಾರ ಬೆಲೆ ಹೆಚ್ಚಳ ಮಾಡಲೇಬೇಕು. ಆದರೆ, ಗ್ರಾಹಕರ ಸಂಖ್ಯೆ ಕ್ಷೀಣಿಸಿದರೆ ಹೋಟೆಲ್ ನಿರ್ವಹಣೆ ಕಷ್ಟ ಎನ್ನುತ್ತಾರೆ ಹೊಟೇಲ್ ಮಾಲೀಕರು.
ಬೆಣ್ಣೆ ನಗರಿ ಎಂದೇ ಪ್ರಸಿದ್ಧವಾಗಿರುವ ನಗರದಲ್ಲಿ ಬೆಣ್ಣೆದೋಸೆ ಬೆಲೆಯನ್ನು ಪ್ಲೇಟ್‌ಗೆ ನೂರು ರೂ. ನಿಗದಿಪಡಿಸಿದ್ದರೆ ಇನ್ನೂ ಕೆಲವು ಹೋಟೆಲ್‌ಗಳ ಮಾಲೀಕರು ಯೋಚಿಸಿ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಾಗಿ ಬರುವ ಪ್ರದೇಶದಲ್ಲಿ ಬೆಲೆ ಹೆಚ್ಚಿಸಿದರೆ ವ್ಯವಹಾರ ಕಷ್ಟ ಎಂಬ ಮಾತೂ ಕೇಳಿ ಬರುತ್ತಿದೆ.
ನಮ್ಮ ಹೋಟೆಲ್‌ಗೆ ನಿತ್ಯ 2500 ರೂ. ತರಕಾರಿ ಬೇಕಾಗುತ್ತಿತ್ತು. ಈಗ 6000 ರೂ. ನೀಡಿದರೂ ಕಡಿಮೆ ಎನ್ನುವಂತಾಗಿದೆ. ಇನ್ನು ಆಹಾರ ಧಾನ್ಯ, ಸಿಲಿಂಡರ್, ವಿದ್ಯುತ್ ಬಿಲ್, ಕೆಲಸಗಾರರ ವೇತನ ಎನ್ನುತ್ತ ಹೋದರೆ ಹೋಟೆಲ್ ನಡೆಸುವುದೇ ಬಹಳ ಕಷ್ಟ. ಉದ್ಯಮ ಬಿಡಬಾರದು ಎಂಬ ನಿಟ್ಟಿನಲ್ಲಿ ಹೋಟೆಲ್ ನಡೆಸುವಂತಾಗಿದೆ ಎನ್ನುತ್ತಾರೆ ವ್ಯವಸ್ಥಾಪಕರೊಬ್ಬರು.
ಇನ್ನು ಹಾಲು ಮತ್ತು ತುಪ್ಪದ ಬೆಲೆ ಹೆಚ್ಚಳದಿಂದಾಗಿ ಬೇಕರಿ ಉತ್ಪನ್ನಗಳ ಬೆಲೆಯೂ ಹೆಚ್ಚಾಗುವ ಸಂಭವವಿದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಇಂದಿನಿಂದ ಸ್ವೀಟ್‌ಗಳ ಬೆಲೆಯನ್ನು ಶೇ.5ರಿಂದ 10 ರಷ್ಟು ಹೆಚ್ಚಿಸುತ್ತಿರುವುದಾಗಿ ಮೋತಿ ಫುಡ್ ಪ್ಯಾರಡೈಸ್ ಮಾಲೀಕ ಮೋತಿ ಆರ್. ಗುರುಪ್ರಸಾದ್ ಹೇಳುತ್ತಾರೆ.
ಸರ್ಕಾರದ ಗ್ಯಾರಂಟಿ ಯೋಜನೆ ಬದುಕು ಸುಧಾರಿಸಬಹುದು ಎಂದುಕೊಂಡಿದ್ದ ಬಡ ಹಾಗೂ ಮಧ್ಯಮ ವರ್ಗದ ಜನರು ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸುವಂತಾಗಿದೆ. ಸಣ್ಣಪುಟ್ಟ ಹೋಟೆಲ್ ಮಾಡಿಕೊಂಡು ಜೀವನ ನಡೆಸುವುದು ದುಸ್ತರವಾಗಿದೆ ಎನ್ನುತ್ತಾರೆ ಸಣ್ಣ ಹೊಟೇಲ್ ಮಾಲೀಕ ಹರೀಶ್.
ದಾವಣಗೆರೆ ಹೋಟೆಲ್ ಮಾಲೀಕರ ಸಂಘದಿಂದ ಹೋಟೆಲ್‌ಗಳಲ್ಲಿ ಆಹಾರ ಬೆಲೆ ಹೆಚ್ಚಿಸುವ ಕುರಿತು ಯಾವುದೇ ಕರೆ ನೀಡಲಾಗಿಲ್ಲ. ಬದಲಾಗಿ ದರ ಹೆಚ್ಚಿಸುವ ತೀರ್ಮಾನವನ್ನು ಆಯಾ ಹೋಟೆಲ್‌ಗಳಿಗೆ ಬಿಡಲಾಗಿದೆ. ದೈನಂದಿನ ವ್ಯವಹಾರದ ಮೇಲೆ ಮಾಲೀಕರು ನಿರ್ಧಾರ ಕೈಗೊಳ್ಳಬಹುದು.
-ಮೋತಿ ಪರಮೇಶ್ವರ ರಾವ್, ಅಧ್ಯಕ್ಷರು, ದಾವಣಗೆರೆ ಹೋಟೆಲ್ ಮಾಲೀಕರ ಸಂಘ.