ಶೇಂಗಾ ಬೆಳೆಗೆ ಕೀಟಬಾಧೆ ಉಲ್ಬಣ

05 LXR 3
Published on

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಶೇಂಗಾ ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಗುರುವಾರ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರಿಗೆ ಔಷಧೋಪಚಾರದ ಬಗ್ಗೆ ಮಾರ್ಗದರ್ಶನ ಮಾಡಿದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ಸ್ಫೂರ್ತಿ ಸಮೀಪದ ಗೊಜನೂರು ಗ್ರಾಮದ ಹೊಲಗಳಿಗೆ ಭೇಟಿ ನೀಡಿ ರೋಗವನ್ನು ವೀಕ್ಷಿಸಿದರು. ಒಂದು ತಿಂಗಳಿನಿಂದ ಶೇಂಗಾ ಬೆಳೆಗೆ ಕೀಟಗಳು ಬೇರು ಹಾಗೂ ಕಾಂಡ ಕಡಿದು ಬೆಳೆ ಹಾಳು ಮಾಡುತ್ತಿರುವುದನ್ನು ಪರಿಶೀಲಿಸಿದರು. ರೋಗದ ಕುರಿತು ರೈತರಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ಶೇಂಗಾ ಬಿತ್ತನೆ ಮಾಡಿ ಒಂದು ತಿಂಗಳು ಅವಧಿಯಲ್ಲಿ ಕೀಟಗಳು ಬಾಧಿಸುವುದರಿಂದ ಸಸ್ಯಗಳಿಗೆ ಹಾನಿಯಾಗುತ್ತದೆ. ಬಿತ್ತನೆಗೆ ಮುಂಚೆ ಬೀಜೋಪಚಾರ ಮಾಡಬೇಕು. ಪ್ರತಿವರ್ಷ ಏಕ ಬೆಳೆ ಪದ್ಧತಿ ಬಿಟ್ಟು ಬಹುಬೆಳೆ ಬೆಳೆಯಬೇಕು. ಇದರಿಂದ ರೋಗ ತಗಲುವ ಸಾಧ್ಯತೆ ಕಡಿಮೆ ಆಗುತ್ತದೆ. ಹೆಚ್ಚಿನ ಪ್ರಮಾಣದ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಏಕದಳ ಧಾನ್ಯ ಬಿತ್ತನೆ ಮಾಡಿ, ತದನಂತರ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವುದರಿಂದ ಫಸಲಿನ ಎಲೆಗಳು ಭೂಮಿಗೆ ಬಿದ್ದು ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಇದನ್ನು ರೈತರು ಪಾಲಿಸುವ ಮೂಲಕ ಉತ್ತಮ ಇಳುವರಿ ಪಡೆಯಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಶೇಂಗಾ ಬೆಳೆಯ ಕೀಟಬಾಧೆಯಿಂದ ರಕ್ಷಿಸಲು ಉಪಯೋಗಿಸಬಹುದಾದ ಕ್ರಮಗಳನ್ನು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಖಿ, ಶಿವರಾಜಗೌಡ ಪಾಟೀಲ, ಬಸವರಾಜ ಸೊರಟೂರ, ಶಿವಪುತ್ರಪ್ಪ ತಾರೀಕೊಪ್ಪ, ಸಿದ್ದಪ್ಪ ದೊಡ್ಡಮನಿ, ಶಂಕರಗೌಡ ಪಾಟೀಲ, ರುದ್ರಪ್ಪ ಜವಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net