ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಸೊಳ್ಳೆಗಳ ಕಾಟ ಹೆಚ್ಚಳ

18 NRL-3
Published on

ನರೇಗಲ್ಲ: ಪಟ್ಟಣದ ಪೊಲೀಸ್ ಠಾಣೆಗೆ ಹೊಂದಿಕೊಂಡು ನಿರ್ಮಿಸಿರುವ ಚರಂಡಿ ಅವೈಜ್ಞಾನಿಕವಾಗಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಚರಂಡಿ ಇದ್ದೂ ಇಲ್ಲದಂತಾಗಿದೆ. ಠಾಣೆಯ ಮುಂಭಾಗ ಮತ್ತು ಹಂಚಿನಾಳ ರಸ್ತೆಯ ಕಡೆಗೆ ನಿರ್ಮಿಸಿರುವ ಚರಂಡಿಯ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ದುರ್ವಾಸನೆ ಬೀರುತ್ತಿದೆ. ನೀರು ಹರಿಯದೆ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಸೊಳ್ಳೆಗಳ ಆಶ್ರಯ ತಾಣವಾಗಿ ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿವೆ. ಚರಂಡಿ ನಿರ್ಮಾಣ ಮಾಡದಿದ್ದರೆ ಒಳ್ಳೆಯದಾಗಿತ್ತು ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಯನ್ನು ದುರಸ್ತಿಗೊಳಿಸಿ, ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಕೈಗೊಳ್ಳದ ಕಾರಣ ಸಮಸ್ಯೆಯಾಗಿದೆ. ಅಧಿಕಾರಿಗಳಿಗೂ ಗೊತ್ತಿದ್ದು ಗೊತ್ತಿಲ್ಲದಂತೆ ಸುಮ್ಮನಿದ್ದಾರೆ. ಚರಂಡಿ ನಿರ್ಮಾಣದ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನಿರ್ಮಿಸುವುದು ಸಾಮಾನ್ಯ ಆದರೆ, ಇಲ್ಲಿ ಚರಂಡಿಯಲ್ಲಿನ ನೀರು ಮುಂದೆ ಸಾಗೀ ನಿಂತಲ್ಲಿ ನಿಲ್ಲುತ್ತಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಪಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿ ಎಂ.ಎಸ್. ಧಡೇಸೂರಮಠ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net